ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾನುವಾರ ನಿರಂತರ ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ನಡೆಯುತ್ತಿದ್ದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ರದ್ದುಗೊಳಿಸಲಾಯಿತು.
ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಆದರೆ ಮಳೆಯಿಂದಾಗಿ ಎರಡು ಬಾರಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಮಳೆಯಿಂದಾಗಿ ಅಂತಿಮವಾಗಿ ಓವರ್ ಕಡಿತಗೊಳಿಸಿ 29 ಓವರ್ಗಳ ಪಂದ್ಯವನ್ನು ನಿಗದಿ ಪಡಿಸಿದರೂ ಒಂದು ಇನ್ನಿಂಗ್ಸ್ ಕೂಡ ಪೂರ್ಣಗೊಳ್ಳದೆ ಪಂದ್ಯವನ್ನು ಸ್ಥಗಿತ ಮಾಡಲಾಯಿತು. ಭಾರತ 12.5 ಓವರ್ಗಳಲ್ಲಿ ಒಂದು ವಿಕೆಟ್ಗೆ 89 ರನ್ ಗಳಿಸಿದ್ದಾಗ ಎರಡನೇ ಬಾರಿ ಮಳೆ ಸುರಿದಿದ್ದರಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಭಾರತ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಶಿಖರ್ ಧವನ್ (3) ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಆ ಹಂತದಲ್ಲಿ ಜೊತೆಯಾದ ಶುಭಮನ್ ಗಿಲ್ (45) ಮತ್ತು ಸೂರ್ಯಕುಮಾರ್ ಯಾದವ್ (34) ರೆಡನೇ ವಿಕೆಟ್ ಗೆ 66 ರನ್ ಸೇರಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ವೆಳೆಯೇ ಮಳೆ ಮತ್ತೊಮ್ಮೆ ಕಾಟ ಕೊಟ್ಟಿತು. ಆಕ್ಲೆಂಡ್ ಏಕದಿನ ಪಂದ್ಯವನ್ನು ಏಳು ವಿಕೆಟ್ಗಳಿಂದ ಗೆದ್ದುಕೊಂಡಿರುವ ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಅಂತಿಮ ಪಂದ್ಯ ಬುಧವಾರ ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ.