Friday, December 8, 2023

Latest Posts

ಬಿಷಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಫ್ರಾಂಕೋ ಮುಳಕ್ಕಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
 
ಕೇರಳದ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ತಮ್ಮ ಬಿಷಪ್‌ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ವ್ಯಾಟಿಕನ್‌ ಸಿಟಿಯ ಪೋಪ್ ಅವರು ಜಲಂಧರ್ ಬಿಷಪ್ ಹುದ್ದೆಗೆ ಮುಳಕ್ಕಲ್‌ ನೀಡಿದ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಇನ್ನು ಮುಂದೆ ಫ್ರಾಂಕೋ ಮುಳಕ್ಕಲ್ ಅವರನ್ನು ಬಿಷಪ್ ಎಮೆರಿಟಸ್ ಎಂದು ಕರೆಯಲಾಗುತ್ತದೆ.

ಸನ್ಯಾಸಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮ ಇದಲ್ಲ, ಸ್ವತಃ ಫ್ರಾಂಕೋ ಮುಳಕ್ಕಲ್‌ ಅವರೇ ತಾವಾಗಿಯೇ ರಾಜೀನಾಮೆ ನೀಡಿದ್ದಾರೆ ಎಂದು ಭಾರತದಲ್ಲಿನ ವ್ಯಾಟಿಕನ್ ರಾಯಭಾರಿ ಹೇಳಿದ್ದಾರೆ.

ವೀಡಿಯೊ ಸಂದೇಶದಲ್ಲಿ, ಫ್ರಾಂಕೋ ಮುಳಕ್ಕಲ್‌ ಅವರು ಜಲಂಧರ್ ಡಯಾಸಿಸ್‌ನ ಒಳಿತಿಗಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈ ಹಿಂದೆ ಸನ್ಯಾಸಿನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಫ್ರಾಂಕೋ ಮುಳಕ್ಕಲ್‌ ಅವರನ್ನು ಖುಲಾಸೆಗೊಳಿಸಿತ್ತು. ಬಿಷಪ್ ಖುಲಾಸೆ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸುತ್ತಿರುವಾಗಲೇ ಬಿಷಪ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೆ ಒಳಗಾದ ದೇಶದ ಮೊದಲ ಕ್ಯಾಥೋಲಿಕ್ ಬಿಷಪ್ ಎನ್ನುವ ಕುಖ್ಯಾತಿಯನ್ನು ಫ್ರಾಂಕೋ ಮುಳಕ್ಕಲ್‌ ಎದುರಿಸಿದ್ದಾರೆ.

ಸನ್ಯಾಸಿನಿ ನೀಡಿದ ದೂರಿನ ಮೇರೆಗೆ ಕುರಿಲಂಗಾಡ್ ಪೊಲೀಸರು ಬಿಷಪ್ ಫ್ರಾಂಕೋ ಮುಳಕ್ಕಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರೂ ಎರಡು ತಿಂಗಳ ತನಕ ಯಾವುದೇ ಪ್ರಗತಿ ಸಾಧಿಸಿರಲಿಲ್ಲ. ಇದರ ಬೆನ್ನಲ್ಲಿಯೇ ಮಠದ ಹೊರಗೆ ಸಂನ್ಯಾಸಿನಿಯರ ಧ್ವನಿ ಏರಲು ಆರಂಭವಾಗಿತ್ತಲ್ಲದೆ, ಸಿಸ್ಟರ್ ಅನುಪಮಾ ನೇತೃತ್ವದಲ್ಲಿ ಐವರು ಧರಣಿ ಆರಂಭಿಸಿದರು. ತನ್ನ ಸಹೋದ್ಯೋಗಿ ಅನುಭವಿಸಿದ ಕ್ರೂರ ಚಿತ್ರಹಿಂಸೆಗೆ ಕಾರಣವಾದ ಬಿಷಪ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಯಿತು. ಅಂತಿಮವಾಗಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಬಿಷಪ್ ಅನ್ನು ಬಂಧಿಸಿದರು. 2019ರ ಏಪ್ರಿಲ್ 9ರಂದು ಪಾಲಾ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಅನ್ನು ಸಹ ಸಲ್ಲಿಸಲಾಯಿತು. ಅದರ ನಂತರವೂ ವಿಚಾರಣೆಯನ್ನು ವಿಳಂಬಗೊಳಿಸಲು ಹಲವಾರು ಪ್ರಯತ್ನಗಳು ನಡೆದವು. ಒಂದರ ನಂತರ ಒಂದರಂತೆ ಬಂದಿರುವ ಸಮನ್ಸ್‌ಗಳು ಸ್ಪಷ್ಟವಾಗಿಲ್ಲ ಎಂದು ಬಿಷಪ್ ಬೆಂಬಲಿಗರು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!