ಹೊಸದಿಗಂತ ವರದಿ ಕಲಬುರಗಿ:
ರಾಜ್ಯಾದ್ಯಂತ ತೀವ್ರ ಬರ ಆವರಿಸಿದ್ದು, ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಹೀಗಾಗಿ ರೈತರಿಗೆ ನ್ಯಾಯ ಸಿಗಬೇಕು. ರೈತರ ಸಾಲ ಮನ್ನಾ ಸಹ ಮಾಡಬೇಕು ಇದು ರೈತರ ಹಾಗೂ ನಮ್ಮ ಬೇಡಿಕೆಯಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಇದೇ ವಿಷಯದ ನಿಲುವಳಿ ಮಾಡಿ ಚರ್ಚೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಮಂಗಳವಾರ ಕಲಬುರಗಿ ನಗರಕ್ಕೆ ಆಗಮಿಸಿದ ಅವರು, ಗ್ರಾಮೀಣ ಮತಕ್ಷೇತ್ರದ ಶ್ರೀನಿವಾಸ ಸರಡಗಿ ಗ್ರಾಮದ ಹೊಲಗಳಿಗೆ ತೆರಳಿ ಬಳಿ ಬರ ಅಧ್ಯಯನ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಭಾಗದ ಬಹು ಬೆಳೆಯಾದ ತೊಗರಿ ಸಂಪೂರ್ಣ ಹಾನಿಯಾಗಿದ್ದು, ಬೆಳೆ ಪರಿಹಾರಕ್ಕೆ ಆಗ್ರಹಿಸಿದರು. ಒಂದು ರೂಪಾಯಿ ಸಹ ರಾಜ್ಯ ಸರ್ಕಾರ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಳೆದ ಬಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರವಾಹ ಬಂದಾಗ 180 ಕೋಟಿ ರೂಪಾಯಿ ಪರಿಹಾರ ಹಣ ನೀಡಿದ್ದೇವೆ. ಆ ಸಂದರ್ಭದಲ್ಲಿ ನಾವು ಕೇಂದ್ರ ಸರ್ಕಾರವನ್ನು ನೋಡಿಕೊಂಡು ಕೂಡಲಿಲ್ಲ. ಸದ್ಯ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ.ಹೀಗಾಗಿ ಪರಿಹಾರ ನೀಡುತ್ತಿಲ್ಲ ಎಂದರು.
ರೈತರಿಗೆ ನೀಡಿದ ಪರಿಹಾರದಲ್ಲಿ ಹಣವೇ ನಮೂದು ಮಾಡಿಲ್ಲ, ಹಾಗೂ ಅದರಲ್ಲಿ ನಿಖರತೆ ಇಲ್ಲ. ಹೀಗಾಗಿ ಅಧಿಕಾರಿಗಳಿಗೆ ನಾಟಕ ಆಡಬೇಡಿ ಎಂದು ಹೇಳಿದ್ದೇನೆ ಎಂದರು.