Sunday, February 5, 2023

Latest Posts

“ರಾಜ್ಯದ 50.36 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ”

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 50.36 ಲಕ್ಷ ರೈತರು ನೇರ ನಗದು ಪಾವತಿ ವ್ಯವಸ್ಥೆ ಮೂಲಕ ಒಟ್ಟಾರೆಯಾಗಿ 1,007.26 ಕೋಟಿ ಸಹಾಯಧನವನ್ನು ಪಡೆದುಕೊಳ್ಳಲಿದ್ದಾರೆ. ರೈತರಿಗೆ ನೆರವು ಕಲ್ಪಿಸಿದ ದೂರದೃಷ್ಟಿಯುಳ್ಳ ಜನನಾಯಕ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ.
ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ ಉದ್ಘಾಟನೆ ನೆರವೇರಿಸಿದ್ದಾರೆ. ಜೊತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತಿನ ಭಾಗವಾಗಿ 8 ಕೋಟಿಗಿಂತ ಹೆಚ್ಚು ರೈತರಿಗೆ 16 ಸಾವಿರ ಕೋಟಿ ರೂಪಾಯಿಗಳನ್ನು ಆನ್ ಲೈನ್ ಮೂಲಕ ಹಸ್ತಾಂತರ ಮಾಡಿದ್ದಾರೆ. ಕೃಷಿಕರ ಆದಾಯ ದ್ವಿಗುಣಗೊಳಿಸುವಲ್ಲಿ ಮತ್ತು ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶ್ಲಾಘಿಸಿದ್ದಾರೆ.
ಇಲ್ಲಿಯವರೆಗೆ 11 ಕೋಟಿಗೂ ಹೆಚ್ಚು ಕೃಷಿಕರ ಬ್ಯಾಂಕ್ ಖಾತೆಗೆ ನೇರವಾಗಿ ಎರಡು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣ ಜಮೆ ಮಾಡಲಾಗಿದೆ. ಫಲಾನುಭವಿ ಕೃಷಿಕರಿಗೆ ಮೂರು ಕಂತುಗಳಲ್ಲಿ ಪ್ರತಿ ವರ್ಷ 6,000 ಕೋಟಿ ರೂಪಾಯಿ ನೇರ ಸೌಲಭ್ಯ ವರ್ಗಾವಣೆ ಮಾಡಲಾಗಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯಿಂದ ಕರ್ನಾಟಕ ರಾಜ್ಯದ ಒಟ್ಟು 50.36 ಲಕ್ಷ ರೈತರು ಒಟ್ಟು 1007.26 ಕೋಟಿ ಸಹಾಯಧನವನ್ನು ನೇರ ನಗದು ಪಾವತಿ ಮೂಲಕ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆ:
ಪ್ರಧಾನಿಯವರು 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆ ನೆರವೇರಿಸಿದ್ದಾರೆ. ಈ ಸಮೃದ್ಧಿ ಕೇಂದ್ರಗಳ ಮೂಲಕ ಕೃಷಿಗೆ ಸಂಬಂಧಿಸಿದಂತೆ ಕೃಷಿಕರ ಅಗತ್ಯವಾದ ಎಲ್ಲಾ ವಸ್ತುಗಳನ್ನು ಪೂರೈಕೆ ಮಾಡಲಾಗುವುದು. 3.3 ಲಕ್ಷ ರಸಗೊಬ್ಬರಗಳ ಅಂಗಡಿಗಳನ್ನು ಹಂತಹಂತವಾಗಿ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಇದರಿಂದ ರೈತರ ಸಮಸ್ಯೆಗಳು ನೀಗಲಿವೆ ಎಂದು ಕಡಾಡಿ ತಿಳಿಸಿದ್ದಾರೆ.
ದೇಶದಲ್ಲಿ 300 ಸ್ಟಾರ್ಟಪ್ ಸ್ಟಾಲ್‍ಗಳ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಉನ್ನತ ವಿಜ್ಞಾನಿಗಳು, ಕೃಷಿ ತಜ್ಞರು, ನೀತಿ ನಿರೂಪಕರಿಂದ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಪ್ರಧಾನಮಂತ್ರಿ ಭಾರತೀಯ ಜನ ಉರ್ವಾರಕ್ ಯೋಜನೆಯಡಿ ಒಂದು ದೇಶ, ಒಂದು ರಸಗೊಬ್ಬರ ಯೋಜನೆ ಅನುಷ್ಠಾನಗೊಂಡಿದೆ. ಇದರ ಅಡಿಯಲ್ಲಿ ದೇಶದ ಎಲ್ಲ ಕೃಷಿಕರಿಗೆ ಭಾರತ್ ಬ್ರಾಂಡ್ ಯೂರಿಯಾವನ್ನು ಒದಗಿಸಲಾಗುತ್ತಿದೆ. ಈ ಸಂಬಂಧ ಭಾರತ್ ಯೂರಿಯ ಬ್ಯಾಗ್‍ಗಳ ಲೋಕಾರ್ಪಣೆ ಕಾರ್ಯವೂ ನೆರವೇರಿದೆ ಎಂದು ವಿವರಿಸಿದ್ದಾರೆ.
ಇಂಡಿಯನ್ ಎಡ್ಜ್- ರಸಗೊಬ್ಬರ ಇ-ಮ್ಯಾಗಜೀನ್ ಲೋಕಾರ್ಪಣೆ, ರಸಗೊಬ್ಬರದ ಲಭ್ಯತೆ ಹಾಗೂ ಬಳಕೆಯ ಕುರಿತಾದ ದೇಶೀಯ ಹಾಗೂ ಅಂತಾರಾಷ್ಟ್ರೀಯ ದೃಷ್ಟಿಕೋನಗಳ ಕುರಿತಾದ ಮಾಹಿತಿಯನ್ನು ಒದಗಿಸುವ ದೊಡ್ಡ ವೇದಿಕೆ ಇದಾಗಿದೆ. ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗಲೆಂದು ವಿವಿಧ ಯೋಜನೆಗಳನ್ನು ಇಂದು ನೂತನವಾಗಿ ಜಾರಿಗೆ ತಂದಿದೆ. ನಮ್ಮ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಈರಣ್ಣ ಕಡಾಡಿ ಅವರು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!