Friday, March 31, 2023

Latest Posts

ಸಿದ್ದರಾಮಯ್ಯರಿಂದ ಹೆದ್ದಾರಿ ಪರಿಶೀಲನೆಯಲ್ಲ ; ಜಾಲಿರೈಡ್: ಪ್ರತಾಪಸಿಂಹ ಟೀಕೆ

ಹೊಸ ದಿಗಂತ ವರದಿ, ಮಂಡ್ಯ :

ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜಾಲಿರೈಡ್ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಟೀಕಿಸಿದರು.
ಈ ಯೋಜನೆ ನಮ್ಮ ಸರ್ಕಾರ ರೂಪಿಸಿದ್ದು ಎಂದು ಹೇಳುತ್ತಾರೆ. ಆದರೆ ಈ ಹಿಂದೆ ನರೇಂದ್ರಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದ ವೇಳೆ ದಿ. ಅನಂತಕುಮಾರ್ ಅವರು ಕೇಂದ್ರದಲ್ಲಿ ಸಚಿವರಾಗಿದ್ದರು. ಅವರು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಟ್ಟು ಯೋಜನೆಯನ್ನು ರೂಪಿಸಿದ್ದರು. ಅಂದು ಈ ಭಾಗದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಅಧಿಸೂಚನೆಗಳ ಪ್ರಕಟಣೆಯನ್ನು ಫಲಕಗಳಲ್ಲಿ ಅಳವಡಿಸಲಾಗಿತ್ತು. ಭೂಸ್ವಾಧೀನದಲ್ಲಿ ಉಂಟಾಗುವ ವಿವಾದಗಳನ್ನೂ ಪರಿಹರಿಸುವಂತೆ ಸೂಚಿಸಲಾಗಿತ್ತು ಎಂದು ವಿವರಿಸಿದರು.

ನಾವೇ ಯೋಜನೆ ರೂಪಿಸಿದ್ದೇವೆ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಮೂಡಿದಾಗ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಬೇಕಿತ್ತು. ಭಾರೀ ಮಳೆಯಿಂದಾಗಿ ರಸ್ತೆಯಲ್ಲೇ ನೀರು ತುಂಬಿದಾಗ ಬರಬೇಕಿತ್ತು. ಅಷ್ಟೆ ಏಕೆ ಮಂಡ್ಯದ ಬಳಿ ಕೆರೆ ಒಡೆದು ರಸ್ತೆಗೆ ನೀರು ನುಗ್ಗಿದಾಗಲೂ ಸಿದ್ದರಾಮಯ್ಯ ಬರಲಿಲ್ಲ. ಅಲ್ಲಲ್ಲಿ ಬರುವ ಗ್ರಾಮಗಳಿಗೆ ಅಂಡರ್‌ಪಾಸ್ ಸಮಸ್ಯೆಯಾದಾಗಲೂ ಬರಲಿಲ್ಲ. ಈಗ ಪರಿಶೀಲನೆಗೆ ಬರುವ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಕಾಮಗಾರಿ ನಡೆಯುವ ವೇಳೆ ಬಂದಿದ್ದರೆ ಅದಕ್ಕೆ ಅರ್ಥ ಇರುತ್ತಿತ್ತು. ಈಗ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಧಾನಿಯವರು ಲೋಕಾರ್ಪಣೆ ಮಾಡುವ ವೇಳೆ ಸಿದ್ದರಾಮಯ್ಯ ಪರಿಶೀಲನೆ ಮಾಡಲ್ಲ, ಜಾರಿರೈಡ್ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಜನರನ್ನು ಕರೆತರಲಿ: ಸವಾಲು

ಅವರದ್ದೇ ಪಕ್ಷದ ನಾಯಕರಾಗಿರುವ ರಾಹುಲ್‌ಗಾಂಧಿ, ಸೋನಿಯಾಗಾಂಧಿ ಅವರನ್ನು ಕರೆತಂದು ಮಂಡ್ಯದಲ್ಲೇ ಕಾರ‌್ಯಕ್ರಮ ರೂಪಿಸಲಿ, ನಾವೂ ಮೋದಿಯವರನ್ನು ಕರೆತಂದು ಕಾರ‌್ಯಕ್ರಮ ಮಾಡುತ್ತೇವೆ. ಜನರು ಯಾವ ಕಾರ‌್ಯಕ್ರಮಕ್ಕೆ ಹೆಚ್ಚು ಬರುತ್ತಾರೆ ಎಂಬುದರ ಬಗ್ಗೆ ಶಕ್ತಿ ಪ್ರದರ್ಶನ ಮಾಡೋಣ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಷ್ಟೇ ಅಲ್ಲ, ಸೋನಿಯಾ, ರಾಹುಲ್ ಎಲ್ಲರನ್ನೂ ಕರೆತರಲಿ, ಶಕ್ತಿ ಪ್ರದರ್ಶನ ಮಾಡೋಣ. ಜನ ಎಲ್ಲಿಗೆ ಹೆಚ್ಚು ಬರುತ್ತಾರೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!