ಇಂಡಿಯಾ ಬಣಕ್ಕೆ ಹಿನ್ನಡೆ; ಪಂಜಾಬ್‌ನ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ಆಪ್ ಏಕಾಂಗಿ ಸ್ಪರ್ಧೆ: ಕೇಜ್ರಿವಾಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಪಕ್ಷ ಇಂಡಿಯಾ ಬಣಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಪಂಜಾಬ್‌ನ ಎಲ್ಲಾ 13 ಲೋಕಸಭಾ ಸ್ಥಾನಗಳಿಗೆ ತಮ್ಮ ಪಕ್ಷವು ಅಭ್ಯರ್ಥಿಗಳ ಘೋಷಿಸಲಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಎಎಪಿ ರಾಜ್ಯದ ಎಲ್ಲಾ 13 ಮತ್ತು ಚಂಡೀಗಢದ 1 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶನಿವಾರ ಘೋಷಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಹೇಳಿಕೆ ವಿರೋಧ ಪಕ್ಷದ ಗುಂಪಿನಲ್ಲಿ ಗೊಂದಲ ಹೆಚ್ಚಿಸಲಿದೆ. ಈಗಾಗಲೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪಕ್ಷವು ಪಶ್ಚಿಮ ಬಂಗಾಳದಲ್ಲಿ ತನ್ನ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದದ ಲಕ್ಷಣಗಳು ಕಂಡುಬಂದಿರುವ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಅಸ್ಪಷ್ಟವಾಗಿದೆ. ಈ ಹೊತ್ತಲ್ಲೇ ಇಂಡಿಯಾ ಬಣದಲ್ಲಿದ್ದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವು ಎನ್‌ಡಿಎ ಜೊತೆ ಕೈಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಜಯಂತ್ ಚೌಧರಿ ಅವರ ತಾತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದಾಗಿನಿಂದ ಚೌಧರಿ, ಎನ್​​ಡಿಎ ಕಡೆ ವಾಲುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಮುಂದಿನ 10-15 ದಿನಗಳಲ್ಲಿ ಪಕ್ಷವು ಈ ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಿಸಲಿದೆ ಎಂದು ಎಎಪಿ ಸಂಚಾಲಕರು ತಿಳಿಸಿದ್ದಾರೆ. ಪಂಜಾಬ್ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರವನ್ನು ‘ಬಾಗಿಲಿಗೆ ತಲುಪಿಸಲು’ ಆಯೋಜಿಸಲಾದ ಸಭೆಯಲ್ಲಿ ಕೇಜ್ರಿವಾಲ್ ಅವರು ಈ ಘೋಷಣೆ ಮಾಡಿದರು.

ಎರಡು ವರ್ಷಗಳ ಹಿಂದೆ, ನೀವು ನಮಗೆ ಆಶೀರ್ವಾದ ನೀಡಿದ್ದೀರಿ. ನೀವು 117 ಸ್ಥಾನಗಳಲ್ಲಿ 92 ಸ್ಥಾನಗಳನ್ನ ನಮಗೆ (ವಿಧಾನಸಭಾ ಚುನಾವಣೆಯಲ್ಲಿ) ನೀಡಿದ್ದೀರಿ, ನೀವು ಪಂಜಾಬ್ನಲ್ಲಿ ಇತಿಹಾಸವನ್ನ ರಚಿಸಿದ್ದೀರಿ. ನಾನು ಕೈಮುಗಿದು ನಿಮ್ಮ ಬಳಿಗೆ ಬಂದಿದ್ದೇನೆ, ಇನ್ನೂ ಒಂದು ಆಶೀರ್ವಾದ ಕೇಳುತ್ತಿದ್ದೇನೆ. ಇನ್ನು ಎರಡು ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ 13 ಸ್ಥಾನಗಳು ಮತ್ತು ಚಂಡೀಗಢದಿಂದ ಒಂದು ಸ್ಥಾನವಿದೆ – ಒಟ್ಟು 14 ಸ್ಥಾನಗಳು. ಮುಂದಿನ 10-15 ದಿನಗಳಲ್ಲಿ ಎಎಪಿ ಈ ಎಲ್ಲಾ 14 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದೆ. ನೀವು ಎಎಪಿಯನ್ನು ಈ ಎಲ್ಲಾ 14 ಸ್ಥಾನಗಳನ್ನು ಬಹುಮತದೊಂದಿಗೆ ಗೆಲ್ಲುವಂತೆ ಮಾಡಬೇಕು ಎಂದು ಹೇಳಿದರು.

ಇಂಡಿಯಾ ಬಣದಲ್ಲಿ ಅದರ ಮಿತ್ರಪಕ್ಷಗಳಲ್ಲಿ ಒಂದಾಗಿರುವ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಕೇಜ್ರಿವಾಲ್, ಪಂಜಾಬ್‌ನಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಕಾಂಗ್ರೆಸ್ ಅಥವಾ ಅಕಾಲಿದಳ ಏನಾದರೂ ಒಳ್ಳೆಯ ಕೆಲಸ ಮಾಡಿದೆಯೇ ಎಂದು ಜನರನ್ನು ಕೇಳಿದರು. ಇಂದು ನಾನು ನಿಮ್ಮನ್ನು ಕೇಳಿದರೆ 75 ವರ್ಷಗಳಲ್ಲಿ ಕಾಂಗ್ರೆಸ್ ಇಷ್ಟು ವರ್ಷ ಆಡಳಿತ ನಡೆಸಿದೆ. ಕಾಂಗ್ರೆಸ್ ಮಾಡಿದ ಒಂದು ಒಳ್ಳೆಯ ಕೆಲಸ ಹೇಳಿ. ನಿಮಗೆ ಅದು ನೆನಪಿರುವುದಿಲ್ಲ. ಅಕಾಲಿದಳ ಇಷ್ಟು ವರ್ಷ ಆಡಳಿತ ನಡೆಸಿದೆ ಅಂತ ಕೇಳಿದರೆ ಅಕಾಲಿದಳ ಒಂದು ಒಳ್ಳೆ ಕೆಲಸ ಮಾಡಿದೆಯಾ ಹೇಳಿ. ನಿಮಗೆ ಅದು ನೆನಪಿರುವುದಿಲ್ಲ ಎಂದು ಕೇಜ್ರಿವಾಲ್ ವಾಗ್ದಾಳಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!