ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 19 ನೂತನ ಇಎಸ್‌ಐ ಚಿಕಿತ್ಸಾಲಯ: ಸಚಿವ ಶಿವರಾಮ್ ಹೆಬ್ಬಾರ್

ಹೊಸದಿಗಂತ ವರದಿ,ಹಾವೇರಿ:

ರಾಜ್ಯದ ಕಾರ್ಮಿಕರ ಹಿತ ಕಾಯುವುದಕ್ಕೆ ಕೇಂದ್ರ ಸರ್ಕಾರ ೧೯ ನೂತನ ಇಎಸ್‌ಐ ಚಿಕಿತ್ಸಾಲಯಗಳನ್ನು ಮಂಜೂರು ಮಾಡಿದೆ ಎಂದು ಕಾರ್ಮಿಕ ಸಚಿವ ಅರಬೈಲ ಶಿವರಾಮ್ ಹೆಬ್ಬಾರ ಹೇಳಿದರು.
ಜಿಲ್ಲೆಯ ರಾಣೇಬೆನ್ನೂರ ನಗರದಲ್ಲಿ ನೂತನವಾಗಿ ಆರಂಭಿಸಲಾದ ಇಎಸ್‌ಐ ಆಸ್ಪತ್ರೆ ಪ್ರಾರಂಭೋತ್ಸವ ಮತ್ತು ನೂತನ ಕಟ್ಟಡ ಉದ್ಘಾಟನೆ ನೆರವೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ರಾಜ್ಯದಲ್ಲಿ ೧೧೩ ಇಎಸ್‌ಐ ಚಿಕಿತ್ಸಾಲಯಗಳಿದ್ದವು ಈ ಎಲ್ಲಾ ಆಸ್ಪತ್ರೆಗಳಿಗೆ ವೈದ್ಯರು, ಶುಶ್ರೂಷಿಕಿಯರು ಔಷಧಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೧.೯೫ ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. ಇದರಲ್ಲಿ ಇಎಸ್‌ಐ ಚಿಕಿತ್ಸಾಲಯದ ಸೌಲಭ್ಯವನ್ನು ಪಡೆದುಕೊಳ್ಳುವ ಅರ್ಹತೆಯನ್ನು ೩೬ ಸಾವಿರ ಕಟ್ಟಡ ಕಾರ್ಮಿಕರು ಹೊಂದಿದ್ದಾರೆ. ಈ ಇಎಸ್‌ಐ ಚಿಕಿತ್ಸಾಲಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಗಾಗಿ ರಾಜ್ಯದಲ್ಲಿರುವ ೭ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುವುದು ಎಂದು ಹೇಳಿದರು.
ಡಾವಣಗೇರಿಯಲ್ಲಿರುವ ದೊಡ್ಡ ಆಸ್ಪತ್ರೆಯನ್ನು ಪೆನಲ್ ಆಸ್ಪತ್ರೆಯನ್ನಾಗಿ ರಾಜ್ಯ ಸರ್ಕಾರ ಇಟ್ಟುಕೊಂಡಿದೆ. ಆಪರೇಷನ್ ಮಾಡಬೇಕಾದರೆ ಹುಬ್ಬಳ್ಳಿ ಇಲ್ಲವೆ ಡಾವಣಗೇರಿಯ ಇಎಸ್‌ಐ ಯೋಜನೆಯಲ್ಲಿ ಚಿಕಿತ್ಸೆ ನೀಡುವಂತಹ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುವುದು ಎಂದರು.
ಇಎಸ್‌ಐ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗಳಿಗೆ ವಾರ್ಷಿಕವಾಗಿ ೭೫ ಕೋಟಿಗೂ ಅಧಿಕ ಮೌಲ್ಯದ ಔಷಧಿಗಳನ್ನು ಕೇಂದ್ರ ಸರ್ಕಾರದ ಇಎಸ್‌ಐ ಇಲಾಖೆ ನೀಡುತ್ತಿದೆ. ಇಂತಹ ಆಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಮತ್ತು ನರ್ಸ್‌ಗಳ ವೇತನವನ್ನು ಸಹ ಕೇಂದ್ರ ಸರ್ಕಾರವೇ ನೀಡುತ್ತದೆ. ರಾಜ್ಯದಲಲಿ ೧೧೩ ಚಿಕಿತ್ಸಾಲಯಗಳು, ೭ ಆಸ್ಪತ್ರೆಗಳು ಮತ್ತು ಎರಡು ದೊಡ್ಡ ಆಸ್ಪತ್ರೆಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಚೊಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಗುಲಬರ್ಗ ಮತ್ತು ರಾಜಾಜಿ ನಗರದಲ್ಲಿರುವ ಇಎಸ್‌ಐ ಆಸ್ಪತ್ರೆಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿ ನಡೆಯುತ್ತವೆ. ಉಳಿದೆಲ್ಲ ಆಸ್ಪತ್ರೆಗಳು ರಾಜ್ಯ ಕಾರ್ಮಿಕ ಇಲಾಖೆಯ ಆಧೀನದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಬಹಳವಾಗಿ ಕಾಡುತ್ತಿರುವುದು ವೈದ್ಯರ ಕೊರತೆ. ಇಂದು ಕೆಲಸಕ್ಕೆ ಬರುತ್ತಾರೆ ನಾಳೆ ಕೆಲಸವನ್ನು ಬಿಟ್ಟು ಹೋಗುತ್ತಾರೆ ಇದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಯಾರಿಗೂ ಯಾವ ರಾಜ್ಯಕ್ಕೂ ತಪ್ಪಲಾರ ಸಮಸ್ಯೆಯಾಗಿದೆ. ಕಳೆದ ವರ್ಷ ೧೨೬ ವೈದ್ಯರನ್ನು ಕೆಪಿಎಸ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ ಹೀಗಾಗಿ ಬಹುತೇಕ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿಲ್ಲ ಎಂದರು.
ವಿವಿಧ ಇಎಸ್‌ಐ ಆಸ್ಪತ್ರೆಗಳಿಗೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿಸಲು ೪೬ ಕೋಟಿರೂಗಳ ಟೆಂಡರನ್ನು ಕರೆಯಲಾಗಿದೆ. ಒಟ್ಟಾರೆ ರಾಜ್ಯದಲ್ಲಿರುವ ಇಎಸ್‌ಐ ಆಸ್ಪತ್ರೆಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಲಾಗುತ್ತಿದೆ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ಎಂಬಿಬಿಎಸ್‌ನ್ನು ಹಿಂದಿ ಭಾಷೆಯಲ್ಲಿ ಕಲಿಸಲು ಕ್ರಮ ಕೈಗೊಂಡಂತೆ ರಾಜ್ಯದಲ್ಲಿಯೂ ಹಿಂದಿಯಲ್ಲಿ ಕಲಿಸಲು ಕ್ರಮ ಕೈಗೊಳ್ಳಲಾಗುವುದೆ ಎಂಬ ಪ್ರಶ್ನೆಗೆ ರಾಜ್ಯದಲ್ಲಿ ಹಿಂದಿ ಹೇರಿಕೆಯಿಲ್ಲ ಎಂದು ಇಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ. ಉತ್ತರ ಭಾರತದಲ್ಲಿ ಹಿಂದಿಯೇ ಅಲ್ಲಿನ ಮಾತೃ ಭಾಷೆ ಆಗಿರುವುದರಿಂzದಾಗಿ ಅವರು ಹಿಂದಿಯಲ್ಲಿ ಕಲಿಸುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ರಾಷ್ಟ್ರ ನಾಯಕರೊಂದಿಗೆ ಹಿಂದಿಯಲ್ಲಿ ಕಲಿಕೆ ಕುರಿತು ಮಾತನಾಡಿದ್ದಾರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತಗೆದುಕೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಅರುಣಕುಮಾರ ಗುತ್ತೂರ, ಭಾರತಿ ಜಂಬಗಿ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!