ಕೊಡಗಿನಲ್ಲಿ ಮಾನವ- ವನ್ಯಜೀವಿ ಸಂಘರ್ಷ ತಡೆಗಟ್ಟುವಲ್ಲಿ ಸರ್ಕಾರ ವಿಫಲ: ಬ್ರಿಜೇಶ್ ಕಾಳಪ್ಪ ಟೀಕೆ

ಹೊಸದಿಗಂತ ವರದಿ, ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ನಿರಂತರವಾಗಿದ್ದು, ಮಾನವ ಜೀವ ಹಾನಿಯಾಗುತ್ತಿದ್ದರೂ ಸಮಸ್ಯೆಯ ಗಂಭೀರತೆಯನ್ನು ಅರಿಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅರಣ್ಯ ಪ್ರದೇಶದಿಂದ ಕೂಡಿರುವ ಕೊಡಗು ಜಿಲ್ಲೆಯನ್ನು ಅರಣ್ಯ ಸಚಿವರು ಮರೆತಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ದಕ್ಷಿಣ ಕೊಡಗಿನ ರುದ್ರಗುಪ್ಪೆಯಲ್ಲಿ ಹುಲಿ ದಾಳಿಯಿಂದ ಕಾರ್ಮಿಕ ಬಲಿಯಾಗಿರುವ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ 5 ವರ್ಷಗಳಿಂದ ಕೊಡಗು ಜಿಲ್ಲೆಯನ್ನು ವನ್ಯಜೀವಿಗಳು ಅತಿಯಾಗಿ ಕಾಡುತ್ತಿವೆ. ಕಳೆದ ವರ್ಷ ಹುಲಿ ದಾಳಿಗೆ ಮೂವರು ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಜಾನುವಾರುಗಳು ಜೀವ ಕಳೆದುಕೊಂಡಿವೆ. ಇದೀಗ ಮತ್ತೊಂದು ಮಾನವ ಜೀವ ಬಲಿಯಾಗಿದೆ. ಆದರೆ ಕಳೆದ 20- 25 ವರ್ಷಗಳಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರುಗಳು ಸರ್ಕಾರದ ಮೇಲೆ ಪ್ರಭಾವ ಬೀರಿ ವನ್ಯಜೀವಿ ದಾಳಿ ತಡೆಗೆ ಶಾಶ್ವತ ಪರಿಹಾರ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಸರಕಾರಕ್ಕೆ ಬೇಡವಾದ ಕೊಡಗು:
ಸರ್ಕಾರಕ್ಕೆ ಕೊಡಗಿನ ಬಗ್ಗೆ ಕರುಣೆ ಇಲ್ಲದಾಗಿದೆ, ಹುಲಿ ಮತ್ತು ಆನೆಗಳ ದಾಳಿಯಿಂದ ಮಾನವ ಜೀವಗಳು ಬಲಿಯಾಗುತ್ತಿದ್ದರೂ ಅರಣ್ಯ ಸಚಿವರನ್ನು ಜಿಲ್ಲೆಗೆ ಕಳುಹಿಸಿ ಪರಿಹಾರ ಸೂಚಿಸುವಂತೆ ಆದೇಶ ಹೊರಡಿಸುವ ಇಚ್ಛಾಶಕ್ತಿಯನ್ನು ಮುಖ್ಯಮಂತ್ರಿಗಳು ಪ್ರದರ್ಶಿಸುತ್ತಿಲ್ಲ. ಸರ್ಕಾರಕ್ಕೆ ಕೊಡಗು ಬೇಡವಾಗಿದೆ. ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ಮಾತ್ರವಲ್ಲದೆ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳಿವೆ. ಸಂಬಂಧಪಟ್ಟ ಖಾತೆಯ ಸಚಿವರು ಜಂಟಿಯಾಗಿ ಕೊಡಗಿನಲ್ಲೇ ಸಭೆ ನಡೆಸಬೇಕೆನ್ನುವ ಒತ್ತಾಯವನ್ನು ಜನ ಮಾಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಅರಣ್ಯ ಅಧಿಕಾರಿಗಳ ಮೂಗಿನ ನೇರಕ್ಕೆ ನಿಶಾನೆ ಮೊಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಹರಳು ದಂಧೆ ನಡೆದಿದೆ. ಕಾಡಾನೆ ಹಾವಳಿ ತಡೆಗೆ ರೂಪಿಸಿರುವ ಯೋಜನೆಗಳು ವಿಫಲವಾಗಿವೆ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಮೇಜರ್ ಸರ್ಜರಿ ಅಗತ್ಯ: ಅರಣ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡುವ ಅಗತ್ಯವಿದ್ದು, ಜಿಲ್ಲೆಯ ಶಾಸಕರುಗಳು ಕೂಡಾ ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕಾಗಿದೆ. ಕೇವಲ ಚುನಾವಣೆ ಸಂದರ್ಭ ವನ್ಯಜೀವಿಗಳ ಉಪಟಳ ತಡೆಯುವ ಪೊಳ್ಳು ಭರವಸೆಗಳನ್ನು ನೀಡದೆ ಸಮಸ್ಯೆಗೆ ನೈಜ ಕಾರಣ ಏನು ಎನ್ನುವುದು ತಿಳಿದು ಸರ್ಕಾರದ ಕಿವಿ ಹಿಂಡಬೇಕಾಗಿದೆ. ಇದು ಸಾಧ್ಯವಾಗದಿದ್ದಲ್ಲಿ ಶಾಸಕರುಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಕೊಡಗಿನ ಜನರ ಮೇಲಿನ ಅಭಿಮಾನವನ್ನು ತೋರಿಸಲಿ ಎಂದು ಒತ್ತಾಯಿಸಿದ್ದಾರೆ.
ಅರಣ್ಯ ಪ್ರದೇಶ ಹೆಚ್ಚಾಗಿರುವ ಕೊಡಗು ಜಿಲ್ಲೆಗೆ ಅರಣ್ಯ ಸಚಿವರು ಬಾರದೇ ಇರುವುದನ್ನು ಗಮನಿಸಿದರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಮೇಲೆ ಆಸಕ್ತಿ ಹೊಂದದೇ ಇರುವುದನ್ನು ಅವಲೋಕಿಸಿದರೆ ಇಲ್ಲಿನ ಶಾಸಕರುಗಳು ಸರ್ಕಾರದ ಮೇಲೆ ಎಷ್ಟು ಹಿಡಿತ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!