ಪಕ್ಷ ವಿರೋಧಿ ಚಟುವಟಿಕೆ; ಮಾಜಿ ಎಂಎಲ್ಸಿ ಸೇರಿ ಹಲವರನ್ನು ಪಕ್ಷದಿಂದ ಹೊರಹಾಕಿದ ಸಮಾಜವಾದಿ ಪಾರ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮಾಜಿ ಎಂಎಲ್​ಸಿ ಕೈಲಾಶ್​ ಸಿಂಗ್, ಘಾಜಿಪುರ್​ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಜಯ್ ಯಾದವ್​ ಸೇರಿ ಇನ್ನಿತರ ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್​ ಈ ನಿರ್ಧಾರ ಕೈಗೊಂಡಿದ್ದಾರೆ. ಗಾಜಿಪುರದಲ್ಲಿ ನಡೆದ ಎಂಎಲ್‌ಸಿ ಚುನಾವಣೆಯ ಸಂದರ್ಭದಲ್ಲಿ ಈ ಮುಖಂಡರು ಪಕ್ಷವಿರೋಧಿ ಚಟುವಟಿಕೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಮಾಜವಾದಿ ಪಕ್ಷದ ಪಕ್ಷದ ಮಿತ್ರಪಕ್ಷಗಳಾದ ಅಪ್ನಾ ದಳ (ಕೆ), ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕರೊಂದಿಗೆ ಸಭೆ ನಡೆಸಿದ ಅಖಿಲೇಶ್ ಯಾದವ್​ ಪಕ್ಷದ ಪ್ರಮುಖರೊಂದಿಗೆ ಸಮಾಲೋಚಿಸಿ ಉಚ್ಛಾಟನೆ ನಿರ್ಧಾರ ಹೊರಡಿಸಿದ್ದಾರೆ.
ಅಖಿಲೇಶ್ ಅವರ ಚಿಕ್ಕಪ್ಪ, ಶಾಸಕ ಶಿವಪಾಲ್ ಯಾದವ್ (ಪ್ರಗತಿಶೀಲ ಸಮಾಜವಾದಿ ಪಕ್ಷದ ನಾಯಕ), ಅಪ್ನಾ ದಳ (ಕೆ) ನಾಯಕಿ ಪಲ್ಲವಿ ಪಟೇಲ್ ಸಭೆಗೆ ಹಾಜರಾಗಿರಲಿಲ್ಲ. ಸುಹೆಲ್​ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್, ಆರ್‌ಎಲ್‌ಡಿ ಶಾಸಕಾಂಗ ಪಕ್ಷದ ನಾಯಕ ರಾಜ್‌ಪಾಲ್ ಬಲಿಯಾನ್ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಉತ್ತರ ಪ್ರದೇಶ ಚುನಾವಣೆ ಸೋಲಿನ ಪರಾಮರ್ಶೆ ನಡೆಸಲಾಯಿತು. ಸದನದಲ್ಲಿ ಜನಸಾಮಾನ್ಯರು, ಕಾರ್ಮಿಕರ ಸಮಸ್ಯೆಗಳನ್ನು ಪ್ರಸ್ತಾಪಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ಬಲಿಯಾನ್ ಎಎನ್‌ಐಗೆ ತಿಳಿಸಿದರು.
ಸಭೆಗೆ ಶಿವಪಾಲ್ ಯಾದವ್ ಗೈರುಹಾಜರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಮೈತ್ರಿಕೂಟದಲ್ಲಿ ಯಾವುದೇ ಅಸಮಾಧಾನವಿಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂದರು. ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಲ್ಲಿ 255 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೇರಿದೆ. ಎಸ್‌ಪಿ 111 ಸ್ಥಾನಗಳನ್ನು ಪಡೆದು ಪ್ರತಿಪಕ್ಷವಾಗಿ ಹೊರಹೊಮ್ಮಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!