ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕರ್ನಾಟಕ ಎಟಿಎಂ: ಹೆಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಬಿರುಸು ಪಡೆದಿದ್ದು, ಕುರುಡು ಕಾಂಚಾಣ ಕುಣಿಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಹೆಚ್​ಡಿಕೆ, ಐಟಿ ದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು?, ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು?, ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದಿದ್ದಾರೆ.

ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂ. ಬಿಡುಗಡೆಯಾದ ಬೆನ್ನಲ್ಲೇ ಈ 42 ಕೋಟಿ ರೂ. ಐಟಿ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತದೆ. ಅಲ್ಲಿಗೆ ಕಲೆಕ್ಷನ್ ನಿಜ ಎಂದಾಯಿತು. ಅದು ಎಷ್ಟು ಪರ್ಸಂಟೇಜ್? ಅದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

23 ಬಾಕ್ಸ್​ಗಳಲ್ಲಿ ತುಂಬಿಡಲಾಗಿದ್ದ ಈ ಇಡಗಂಟು ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ. ಅಲ್ಲಿಗೆ ಚುನಾವಣೆಗಾಗಿ ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎನ್ನುವುದು ಸತ್ಯ. ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್​ಗೆ ‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಯ ಕೈ ಕರಾಮತ್ತು ಅಂತ ಇನ್ನೊಂದು ಮಾಹಿತಿ. ಅಷ್ಟರಲ್ಲಿ ಐಟಿ ಇಲಾಖೆ ಮುಗಿಬಿದ್ದ ಪರಿಣಾಮ, ಗುಟ್ಟು ರಟ್ಟಾಗಿದೆ. ಅಲ್ಲಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪರ್ಸೆಂಟೇಜ್ ಪಾರಮ್ಯ ಅವ್ಯಾಹತ ಎಂದಾಯಿತು? ಈಗ ಹೇಳಿ ಸನ್ಮಾನ್ಯ ಸಿದ್ದರಾಮಯ್ಯ ನವರೇ 42 ಕೋಟಿ ರೂ. ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ? ಸಿಬಿಐ, ಇಡಿ, ಹಾಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು? ದಯಮಾಡಿ ಹೇಳಿ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ರೈತರು ಬರ, ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಗುತ್ತಿಗೆದಾರರು ಅಯೋಮಯ ಸ್ಥಿತಿಯಲ್ಲಿದ್ದಾರೆ. ಆದರೂ ಕಲೆಕ್ಷನ್ ‘ಕೈ’ ಚಳಕ ಜೋರಾಗಿದೆ. ಪಂಚ ರಾಜ್ಯಗಳ ಪಾಲಿಗೆ ಕರ್ನಾಟಕ ಸಮೃದ್ಧ ಎಟಿಎಂ ಆಗಿದೆ. ಕಾವೇರಿ ನೀರು ತಮಿಳುನಾಡಿಗೆ ನಿರಂತರ ಹರಿಯುತ್ತಿದ್ದರೆ, ಕನ್ನಡಿಗರ ತೆರಿಗೆಲಕ್ಷ್ಮೀ ಎಲೆಕ್ಷನ್ ರಾಜ್ಯಗಳ ಪಾಲಾಗುತ್ತಿದ್ದಾಳೆ. ಅಂದಿನಿಂದಲೂ ಇದೇ ಕಥೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈಕಮಾಂಡ್​ಗೆ ಹಬ್ಬ. ಈಗಲೂ ಅದೇ ಆಗುತ್ತಿದೆ. ಪಂಚರಾಜ್ಯಗಳ ಚುನಾವಣೆಗಾಗಿ ಕರ್ನಾಟಕಕ್ಕೆ ಕನ್ನ ಹೊಡೆಯಲಾಗಿದೆ. ವೋಟು ಕೊಟ್ಟ ತಪ್ಪಿಗೆ ಕಾಂಗ್ರೆಸ್ ಉಂಡು ಹೋಗುತ್ತಿದೆ, ಕೊಂಡು ಹೋಗುತ್ತಿದೆ. ಇದು ಕನ್ನಡಿಗರ ಕರ್ಮ ಎಂದು ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!