ಕಾವೇರಿ ಜಲ ವಿವಾದ: ರಿವಿಶನ್ ಪಿಟಿಷನ್ ಸಲ್ಲಿಸುತ್ತೇವೆ ಎಂದ ರಾಕೇಶ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾವೇರಿ ಜಲ ವಿವಾದಕ್ಕೆ (Cauvery Water Dispute) ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಹಿನ್ನಡೆಯಾಗಿದ್ದು, ಹೀಗಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery Water regulation Committee) ಶಿಫಾರಸನ್ನು ಎತ್ತಿಹಿಡಿದಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority – CWMA) ಆದೇಶವನ್ನು ಮರು ಪ್ರಶ್ನೆ ಮಾಡಲಾಗುವುದು.ಈ ಸಂಬಂಧ ರಿವಿಶನ್ ಪಿಟಿಷನ್ ಸಲ್ಲಿಸುವುದಾಗಿ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.

ತೀರ್ಪಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಕೇಶ್ ಸಿಂಗ್, ಕಾವೇರಿ ನಿಯಂತ್ರಣ ಸಮಿತಿ 3000 ಸಾವಿರ ಕ್ಯೂಸೆಕ್‌ ನೀರು ಬಿಡಲು ಹೇಳಿತ್ತು. ತಮಿಳುನಾಡು 16 ಸಾವಿರ ಕ್ಯೂಸೆಕ್ ಬಿಡುವಂತೆ ಬೇಡಿಕೆ ಇಟ್ಟಿತ್ತು. 15 ದಿನಗಳು ನಾವು ನೀರು ಬಿಡುವುದಕ್ಕೆ ಆಗುವುದಿಲ್ಲ ಎಂದು ವಾದ ಮಾಡಿದ್ದೇವೆ. ನಾವು ಜಲಾಶಯಗಳಿಂದ ನೀರು ಬಿಡುವುದಿಲ್ಲ ಎಂದು ಹೇಳಿದ್ದೇವೆ. ಹಿಂಗಾರು ಮಳೆ ನೋಡಿಕೊಂಡು ಮುಂದೆ ನೀರು ಬಿಡುತ್ತೇವೆ ಎಂದು ವಾದಿಸಿದ್ದೇವೆ. ಶೇಖರಣೆಯಾಗಿರುವ ನೀರು ಬಿಡಬೇಕು ಎಂದು ತಮಿಳುನಾಡು ವಾದ ಮಾಡಿತ್ತು. ಅದನ್ನು ನಾವು ನಿರಾಕರಣೆ ಮಾಡಿದ್ದೆವು ಎಂದು ತಿಳಿಸಿದರು.

ಒಮ್ಮೆ ನೀರು ಬಿಟ್ಟರೆ ಅದನ್ನು ವಾಪಸ್ ತರಲು ಆಗುವುದಿಲ್ಲ. ಆದರೂ 3000 ಕ್ಯೂಸೆಕ್ ನೀರು ಬಿಡಬೇಕು ಎಂದು ಸಿಡಬ್ಲ್ಯುಎಂಎ ಆದೇಶ ಮಾಡಿದೆ. ಇದರ ವಿರುದ್ಧ ಮತ್ತೆ ರಿವ್ಯೂ ಪಿಟಿಷನ್ ಹಾಕಿ ಪ್ರತಿಭಟಿಸುತ್ತೇವೆ ಎಂದು ರಾಕೇಶ್‌ ಸಿಂಗ್‌ ಹೇಳಿದರು.

ಒಳ ಹರಿವು ಹೆಚ್ಚಾದರೆ ಬ್ಯಾಕ್ ಲಾಕ್ ನೀರು ಬಿಡುತ್ತೇವೆ. ಹಿಂಗಾರು ಮಳೆ ಆಗದಿದ್ದರೆ ನೀರು ಬಿಡಲು ಸಾಧ್ಯವಿಲ್ಲ ಎಂಬುದನ್ನು ನಾವು ಈಗ ಸ್ಪಷ್ಟಪಡಿಸಿದ್ದೇವೆ. ಅಲ್ಲದೆ, ಮೇಕೆದಾಟು ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಿದ್ದೇವೆ. ಈ ಯೋಜನೆ ಜಾರಿಗೆ ಬಂದರೆ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸದು ಎಂದು ಹೇಳಿದ್ದೇವೆ. ಹಾಗಾಗಿ ಮೇಕೆದಾಟು ವಿಚಾರವಾಗಿ ಪ್ರತ್ಯೇಕ ಸಭೆ ಕರೆಯಿರಿ ಎಂದು ಮನವಿ ಮಾಡಿದ್ದೇವೆ ಎಂದು ರಾಕೇಶ್‌ ಸಿಂಗ್‌ ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!