ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 6ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕಿ ಪಲಕ್ ಮುಚ್ಚಲ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಮಿಥುನ್ ಶರ್ಮಾ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿದ್ದಾರೆ.
ಪಲಕ್ ಮುಚ್ಚಲ್ ತಂದೆ ರಾಜಕುಮಾರ್ ಹೆಸರಿಗೆ, ಪ್ರಧಾನಿ ಕಚೇರಿಯಿಂದ ಪತ್ರ ಬಂದಿದೆ.
‘ಪಲಕ್ ಮತ್ತು ಮಿಥುನ್ ಜತೆಯಾಗಿ, ನಂಬಿಕೆಯಿಂದ ಜೀವನ ಪ್ರಯಾಣ ಪ್ರಾರಂಭಿಸಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಪ್ರತಿದಿನವೂ ಪ್ರೀತಿಯನ್ನು ಹಂಚಿಕೊಳ್ಳಿ. ನೂರು ವರ್ಷ ಚೆನ್ನಾಗಿ ಬಾಳಿ. ಇಡೀ ಕುಟುಂಬ, ವಂಶದ ಗೌರವ ಉಳಿಸಿ ಬದುಕಿ. ಎಲ್ಲ ಸಮಯದಲ್ಲೂ ಒಬ್ಬರಿಗೊಬ್ಬರು ನೆರವಾಗಿ ನಿಲ್ಲಿ. ಇಬ್ಬರೂ ಜತೆಯಾಗಿ ಕನಸುಗಳನ್ನು, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಿ. ಪರಸ್ಪರ ಹೊಂದಾಣಿಕೆಯಿಂದ ಜವಾಬ್ದಾರಿಗಳನ್ನು ನಿಭಾಯಿಸಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ. ಅಷ್ಟೇ ಅಲ್ಲ, ‘ಮದುವೆ ಎಂಬುದು ಎರಡು ಕುಟುಂಬಗಳಿಗೆ ಸಂಬಂಧಪಟ್ಟ ವಿಷಯ ಮತ್ತು ಎರಡೂ ಕುಟುಂಬಗಳಿಗೂ ವಿಶೇಷ ಸಂಭ್ರಮ. ಮದುವೆಯ ಕ್ಷಣದಿಂದ ಹೊಸದಾದ ಜೀವನ ತೆರೆದುಕೊಳ್ಳುತ್ತದೆ. ನಾನು ಪಲಕ್ ಮತ್ತು ಮಿಥುನ್ ಇಬ್ಬರಿಗೂ ನನ್ನ ಆಶೀರ್ವಾದ ಮತ್ತು ಶುಭ ಹಾರೈಕೆಯನ್ನು ಕಳಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಆ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಿ ಇದೆ.
ಪ್ರಧಾನಿ ನರೇಂದ್ರ ಮೋದಿ ಕಳಿಸಿದ ಪತ್ರವನ್ನು ಪಲಕ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಡಿಯರ್ ಮೋದಿ ಜೀ, ನಿಮ್ಮ ಆಶೀರ್ವಾದಪೂರ್ವಕ ಪತ್ರ ನಮ್ಮ ಹೃದಯವನ್ನು ಸ್ಪರ್ಶಿಸಿದೆ. ನಮ್ಮ ಪಾಲಿಗೆ ಇದು ದೊಡ್ಡ ಗೌರವ. ನಿಮ್ಮ ಪ್ರೀತಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು’ ಎಂದು ಹೇಳಿದ್ದಾರೆ.