ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡಲನಗರಿ ಮಂಗಳೂರಿಲ್ಲಿ ಪ್ರಧಾನಿ ಮೋದಿ ಅಬ್ಬರದ ರೋಡ್ ಶೋ ನಡೆಸಿದ್ದಾರೆ.
ನಾರಾಯಣ ಗುರು ಸರ್ಕಲ್ ಗೆ ಆಗಮಿಸಿದ ಮೋದಿಯವರು ಚಪ್ಪಲಿ ಕಳಚಿಟ್ಟು ಸರ್ಕಲ್ ಹತ್ತಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲದೇ ಸರ್ಕಲ್ ಮೇಲೆ ನಿಂತು ಅಭಿಮಾನಿಗಳಿಗೆ ಕೈ ಬೀಸಿದರು. ಬಳಿಕ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಿದರು.
ರೋಡ್ ಶೋ ನೋಡಲು ರಸ್ತೆಯ ಎರಡೂ ಬದಿಗಳಲ್ಲಿ ಜನ ಕಿಕ್ಕಿರಿದು ಸೇರಿದ್ದಾರೆ. ಸುಮಾರು ಎರಡು ಕಿಲೋಮೀಟರ್ ದೂರ ಪ್ರಧಾನಿಯವರ ರೋಡ್ ಶೋ ನಡೆಸಿ , ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ, ಮೋದಿ ಪರ ಜಯಘೋಷ ಮೊಳಗಿದ್ದು, ಅಭಿಮಾನಿಗಳು ಹೂವಿನ ಮಳೆ ಸುರಿಸಿದ್ದಾರೆ. ಜೈಶ್ರೀರಾಮ್ ಘೋಷಣೆಯಂತೂ ಮುಗಿಲು ಮುಟ್ಟಿದೆ. ದಾರಿಯುದ್ದಕ್ಕೂ ಮೋದಿ ಕಮಲದ ಚಿಹ್ನೆ ಕೈಯಲ್ಲಿಡಿದು ಜನರತ್ತ ಕೈ ಬೀಸಿದ್ದಾರೆ. ಅವರಿಗೆ ಅಭ್ಯರ್ಥಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ ಸಾಥ್ ನೀಡಿದ್ದಾರೆ.
ಮೋದಿ ಮುಖವಾಡ ಧರಿಸಿ ಅಭಿಮಾನಿಗಳು ಘೋಷಣೆ ಕೂಗಿದರು. ಅಭಿಮಾನಿಗಳ ಪ್ರೀತಿ ಕಂಡು ಪುಳಕಿತರಾದ ನರೇಂದ್ರ ಮೋದಿ, ಕಾರ್ಯಕರ್ತರತ್ತ ಹೂ ಎಸೆದು ಖುಷಿ ವ್ಯಕ್ತಪಡಿಸಿದರು. ಜೊತೆಗೆ ಕಮಲದ ಚಿಹ್ನೆ ತೋರಿಸಿ ಕಾರ್ಯಕರ್ತರಿಗೆ ಹುರುಪು ತುಂಬಿದರು.