ರಾಜ್ಯದಲ್ಲಿ ಮತ್ತೆ ಆಗುತ್ತಾ ಟಫ್ ರೂಲ್ಸ್ ಜಾರಿ? ಪ್ರಧಾನಿ ಸಭೆ ಬಳಿಕ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಮತ್ತೆ ಬಂದ್ ಆಗುತ್ತಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಅನಾವಶ್ಯಕವಾಗಿ ನಿರ್ಬಂಧ ಹೇರಬಾರದು, ಯಾವುದು ಅವಶ್ಯಕತೆ ಇದೆಯೋ ಎಷ್ಟು ಪ್ರಮಾಣದಲ್ಲಿ ಅಗತ್ಯವಿದೆಯೋ ಅಷ್ಟು ನಿಯಮಗಳನ್ನು ಮಾತ್ರ ಅಳವಡಿಸಿ ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿ ಅಗತ್ಯ ಪ್ರಮಾಣದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಕೋವಿಡ್ ಸ್ಥಿತಿಗತಿಗಳನ್ನೆಲ್ಲಾ ಪ್ರಧಾನಿಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಏಪ್ರಿಲ್ 9ರ ನಂತರ ಮಾತ್ರ ಬೆಂಗಳೂರಿನಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಅದರ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಹೆಚ್ಚಿಸುತ್ತಿದ್ದೇವೆ. ಪ್ರತಿದಿನ 30,000 ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಅದರಲ್ಲಿ 10,000 ಟೆಸ್ಟ್ ಬೆಂಗಳೂರಿನಲ್ಲೇ ನಡೆಸಲಾಗುತ್ತದೆ ಎಂದರು.

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ:
ಇನ್ನು ರಾಜ್ಯಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಅವರ ಟೆಲಿ ಟ್ರಾಕಿಂಗ್ ಕೂಡ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ ಇಂಡೋನೇಷಿಯಾ, ನ್ಯೂಜಿಲ್ಯಾಂಡ್, ಸೌತ್ ಕೊರಿಯಾ ಕಡೆಯಿಂದ ಬರುವವರ ಮೇಲೆ ಎಚ್ಚರಿಕೆ ವಹಿಸಲಾಗಿದೆ. 50 ಸಾವಿರಕ್ಕೂ ಹೆಚ್ಚು ಬೆಡ್ ಸರ್ಕಾರಿ ವಲಯದ ಆಸ್ಪತ್ರೆಯಲ್ಲಿದೆ. ಒಂದು ಲಕ್ಷಕ್ಕೂ ಹೆಚ್ಚು ಬೆಡ್ ಖಾಸಗಿ ಆಸ್ಪತ್ರೆಯಲ್ಲಿವೆ. ಅಗತ್ಯ ಆಮ್ಲಜನಕ ದಾಸ್ತಾನಿದೆ ಎಂದು ಪ್ರಧಾನಿ ಮೋದಿಗೆ ತಿಳಿಸಿದ್ದೇವೆ ಎಂದರು.

ಆರು ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಅನುಮತಿ ನೀಡಿದ್ದು, ಶಾಲೆಗಳಲ್ಲಿ ಅಭಿಯಾನದ ರೀತಿಯಲ್ಲಿ ಲಸಿಕೆ ಹಾಕಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ. 15ರಿಂದ 18 ವರ್ಷದ ಮಕ್ಕಳಿಗೂ ವ್ಯಾಕ್ಸಿನ್ ನೀಡಿಕೆ ಚುರುಕುಗೊಳಿಸಿದ್ದಾರೆ. ಮಾಸ್ಕ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿ ಅಗತ್ಯ ಕ್ರಮಗಳನ್ನು ಕಡ್ಡಾಯಗೊಳಿಸಲು ಪ್ರಧಾನಿ ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು, ಅಗ್ನಿ ಅವಘಡಗಳು ಆಗದಂತೆ ಆಸ್ಪತ್ರೆಗಳ ಆಡಿಟ್ ಮಾಡಿಸಬೇಕು ಎಂದು ಸೂಚನೆ ಕೊಡಲಾಗಿದೆ. ಲಸಿಕೀಕರಣ ಉತ್ತಮವಾಗಿ ಆಗಿದ್ದರಿಂದಲೇ ಮೂರನೇ ಅಲೆ ನಿಯಂತ್ರಿಸಲು ಸಾಧ್ಯವಾಗಿದೆ. ಹೀಗಾಗಿ ಲಸಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕುಮ್ ಎಂದು ತಿಳಿಸಿದ್ದಾರೆ .

ಪ್ರಧಾನಿ ಸೂಚನೆಯಂತೆ ರಾಜ್ಯದಲ್ಲಿ ಆರು ವರ್ಷದಿಂದ 12 ವರ್ಷದ ಮಕ್ಕಳಿಗೆ ಲಸಿಕಾ ಅಭಿಯಾನ ಮಾಡಲಾಗುತ್ತದೆ. 15ರಿಂದ 18 ಮತ್ತು 60 ವರ್ಷದ ಮೇಲಿನವರಿಗೆ ಇನ್ನಷ್ಟು ಪ್ರಮಾಣದಲ್ಲಿ ಲಸಿಕಾ ಅಭಿಯಾನ ನಡೆಸಲಾಗುತ್ತದೆ. ಎಲ್ಲಾ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಅಲ್ಲಿ ಪಾಸಿಟಿವ್ ಬಂದರೆ ಜೀನೋಮ್ ಸೀಕ್ವೆನ್ಸಿಂಗ್​ಗೆ ಕಳುಹಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!