ರಾಜ್ಯದ 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಗೆ ಗೆಲುವು: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

ಹೊಸದಿಗಂತ ವರದಿ, ಚಿತ್ರದುರ್ಗ : 
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡು ದೈತ್ಯ ಶಕ್ತಿಗಳು ಒಂದಾಗಿವೆ. ಇದರಿಂದಾಗಿ ಈ ಬಾರಿ ರಾಜ್ಯದ ಎಲ್ಲ ೨೮ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದರಂತೆ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಿಂದ ಪ್ರಧಾನಿಯಾಗಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ದೇಶದ ಹಿತರಕ್ಷಣೆ ದೃಷ್ಠಿಯಿಂದ ಇವೆರಡೂ ಶಕ್ತಿಗಳು ಈಗ ಒಂದಾಗಿರುವುದರಿಂದ ದೇಶದಲ್ಲಿ ಈ ಬಾರಿ ೪೦೦ಕ್ಕೂ ಹೆಚ್ಚು ಸ್ಥಾನಗಳು ಎನ್‌ಡಿಎ ಒಕ್ಕೂಟಕ್ಕೆ ಲಭಿಸಲಿವೆ ಎಂದರು.

ಕಾಂಗ್ರೆಸ್‌ನಲ್ಲಿ ಪ್ರಧಾನಿ ಹುದ್ದೆಗೆ ಅರ್ಹರಾದ ಯಾವ ವ್ಯಕ್ತಿಯೂ ಇಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನ ಗಳಿಸಲಾಗದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಎಂದು ಹೇಳಿದರು. ಐಎನ್‌ಡಿಐಎ ಎಂದು ಒಕ್ಕೂಟ ಮಾಡಿಕೊಂಡರು. ಮಮತಾ ಬ್ಯಾನರ್ಜಿ ಇದನ್ನು ವಿರೋಧಿಸಿ ಒಕ್ಕೂಟದಿಂದ ಹೊರ ನಡೆದರು. ಇದರಿಂದ ಐಎನ್‌ಡಿಐಎ ಆರಂಭದಲ್ಲೇ ಹೊಡೆದು ಚೂರಾಗಿ ಹೋಯಿತು. ಇನ್ನು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಯಾವ ಹುಚ್ಚನೂ ಒಪ್ಪುವುದಿಲ್ಲ. ಹಾಗಾಗಿ ಹೆಚ್ಚಿನ ಸಂಖ್ಯೆಯ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್‌ನವರು ಭಯೋತ್ಪದಕರನ್ನು ಹುಟ್ಟುಹಾಕಿದರು. ಇದರಿಂದಾಗಿ ಅವರಿಂದಲೇ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯಾಯಿತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅಲ್ಲಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆಯುತ್ತಿವೆ. ದೇಶಕ್ಕೆ ನರೇಂದ್ರ ಮೋದಿ ಬಂದ ಮೇಲೆ ಭಯೋತ್ಪಾದಕರು ಇಲಿಗಳಂತೆ ಬಿಲದಲ್ಲಿ ಅಡಗಿ ಕುಳಿತಿದ್ದಾರೆ. ದೇಶ ಸುರಕ್ಷಿತವಾಗಿರಬೇಕೆಂದರೆ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿತಾಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಮತದಾರರನ್ನು ಕರೆತಂದು ಎನ್‌ಡಿಎ ಅಭ್ಯರ್ಥಿಗಳ ಪರ ಮತ ಹಾಕಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮುಖ್ಯಸಚೇತಕ ಎನ್.ರವಿಕುಮಾರ್ ಮಾತನಾಡಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಏ.೨೬ ರಂದು ನಡೆಯುವ ಚುನಾವಣೆಯಲ್ಲಿ ಎರಡು ಪಕ್ಷದ ಮುಖಂಡರು, ಪ್ರತಿಯೊಬ್ಬ ಕಾರ್ಯಕರ್ತರು ಮತದಾರರನ್ನು ಬೂತ್‌ಗೆ ಕರೆತಂದು ಗೋವಿಂದ ಕಾರಜೋಳ ಅವರಿಗೆ ಮತ ಹಾಕಿಸಬೇಕು. ದೇಶದಲ್ಲಿ ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆಯಡಿ ಎಲ್ಲ ಅರ್ಹರಿಗೂ ಲಕ್ಷಾಂತರ ರೂಗಳು ಬಂದಿದೆ. ಮೋದಿಯವರು ಕನಸಿನ ಭಾರತವನ್ನು ನಿರ್ಮಾಣ ಮಾಡುವಲ್ಲಿ ಮೋದಿಯವರು ಮುಂದಾಗಿದ್ದಾರೆ ಎಂದರು.

ಗೋವಿಂದ ಕಾರಜೋಳ ಅವರ ಮುದೋಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರ ಪೂರ್ತಿ ನೀರಾವರಿ ಸೌಕರ್ಯ ಕಲ್ಪಿಸಿದ್ದಾರೆ. ಅದರಂತೆ ಚಿತ್ರದುರ್ಗ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಮಾಡಲು ಕಾರಜೋಲ ಅವರನ್ನು ಗೆಲ್ಲಿಸಬೇಕು. ಇವರನ್ನು ಗೆಲ್ಲಿಸಿದಲ್ಲಿ ಕೇಂದ್ರ ಸರ್ಕಾರದಿಂದ ಅಪ್ಪರ್ ಭದ್ರಾಗೆ ೫೩೦೦ ಕೋಟಿ ರೂ. ಅನುದಾನ ತರಲಿದ್ದಾರೆ. ಇದರಲ್ಲಿ ಯಾವ ಅನುಮಾನವೂ ಬೇಡ. ಈ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಸಮನ್ವಯತೆಯಿಂದ ಕೆಲಸ ಮಾಡಿ ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಬೇಕು ಎಂದರು.

ರಾಜ್ಯದಲ್ಲಿ ಸಿದ್ರಾಮಯ್ಯ ಸರ್ಕಾರ ಬಂದರೆ ಬರಗಾಲ. ಯಡಿಯೂರಪ್ಪ ಸರ್ಕಾರ ಎಂದರೆ ಮಳೆಗಾಲ ಎಂಬ ಪ್ರತೀತಿ ಇದೆ. ಈಗಲೂ ಇದೇ ರೀತಿಯಾಗಿದೆ. ಈಗ ಸಿದ್ದರಾಮಯ್ಯ ಸರ್ಕಾರ ಬಂದಿದ್ದು, ಜನತೆ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇದರ ಬಗ್ಗೆ ಸರ್ಕಾರಕ್ಕೆ ಅರಿವು ಇಲ್ಲವಾಗಿದೆ. ಎಂದು ರಾಜ್ಯ ಸರ್ಕಾರದ ವಿರುದ್ದ ರವಿಕುಮಾರ್ ಕಿಡಿ ಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!