ಅರುಣಾಚಲ ಪ್ರದೇಶ ಎಂದೆಂದಿಗೂ ಭಾರತದ ಭಾಗ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣಾಚಲ ಪ್ರದೇಶವು ಹಿಂದೆಯೂ ಭಾರತದ್ದಾಗಿತ್ತು. ಈಗಲೂ ಭಾರತದ್ದಾಗಿದೆ ಹಾಗೂ ಮುಂದೆಯೂ ಭಾರತದ್ದೇ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಖಡಕ್ ಆಗಿ ಹೇಳುವ ಮೂಲಕ ಚೀನಾಗೆ (China) ತಿರುಗೇಟು ನೀಡಿದ್ದಾರೆ.

ಅಸ್ಸಾಂ ಟ್ರಿಬ್ಯೂನ್‌ಗೆ ನೀಡಿದ ಸಂದರ್ಶನದ ಮಾತನಾಡಿದ ಅವರು, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ. ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೇಂದ್ರದ ಯೋಜನೆಗಳು ಕ್ಷಿಪ್ರವಾಗಿ ಅರುಣಾಚಲ ಪ್ರದೇಶವನ್ನು ತಲುಪುತ್ತಿವೆ. ಇದರೊಂದಿಗೆ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಲಾಗುತ್ತಿದೆ. ವಿಕಸಿತ ಭಾರತ, ವಿಕಸಿತ ಈಶಾನ್ಯ ಎಂಬ ಯೋಜನೆ ಅನ್ವಯ ಕಳೆದ ತಿಂಗಳು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 55 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ತವಾಂಗ್‌ಗೆ ಸಂಪರ್ಕ ಕಲ್ಪಿಸುವ, ಎಲ್ಲ ಹವಾಮಾನಗಳಲ್ಲೂ ಕಾರ್ಯನಿರ್ವಹಿಸುವ ಸೆಲಾ ಸುರಂಗವು ಗೇಮ್‌ ಚೇಂಜರ್‌ ಆಗಿದೆ ಎಂದು ಹೇಳಿದ್ದಾರೆ.

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾಂಗ್‌ ಕ್ಸಿಯೋಗಾಂಗ್‌ ಅವರು ಅರುಣಾಚಲ ಪ್ರದೇಶದ ಕುರಿತು ಉದ್ಧಟತನದ ಹೇಳಿಕೆ ನೀಡಿದ್ದರು. ‘ಭಾರತವು ಅಕ್ರಮವಾಗಿ ಅರುಣಾಚಲ ಪ್ರದೇಶದ ಮೇಲೆ ಹಿಡಿತ ಸಾಧಿಸಿದೆ. ಅರುಣಾಚಲ ಪ್ರದೇಶವು ಎಂದಿಗೂ ಚೀನಾದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದಲ್ಲಿ ಭಾರತದ ಚಟುವಟಿಕೆಗಳನ್ನು ಚೀನಾ ಖಡಾಖಂಡಿತವಾಗಿ ವಿರೋಧಿಸುತ್ತದೆ’ ಎಂದು ಹೇಳಿದ್ದರು. ಇದಾದ ಬಳಿಕ ಭಾರತ ಕೂಡ ಚೀನಾಗೆ ಸರಿಯಾಗಿಯೇ ತಿರುಗೇಟು ನೀಡಿತ್ತು. ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕಿಲ್ಲ ಎಂದು ಖಡಕ್ ಆಗಿ ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!