ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಭೇಟಿಯಾದ ಎಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಸೌಹಾರ್ದ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರೊಂದಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಪುಟ್ಟರಾಜು, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಇಂಡುವಾಳು ಸಚ್ಚಿದಾನಂದ, ಉಮೇಶ್ ಇದ್ದರು.
ಬಳಿಕ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕೃಷ್ಣ ಅವರು ನಾಡಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮ ತಂದೆಯವರ ಸಮಕಾಲೀನರು. ತಂದೆಯವರಿಗಿಂತ ಆರು ತಿಂಗಳು ದೊಡ್ಡವರು. ನಾನು ನಾಮಪತ್ರ ಸಲ್ಲಿಸುವ ಮುನ್ನವೇ ಅವರ ಆಶೀರ್ವಾದ ಪಡೆಯಬೇಕಿತ್ತು. ಇವತ್ತು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದರು.

ನಾನು ಪ್ರಥಮವಾಗಿ ರಾಜಕೀಯಕ್ಕೆ ಸ್ಪರ್ಧೆ ಮಾಡಿದಾಗ ಕೃಷ್ಣ ಅವರು ಆಶೀರ್ವಾದ ಮಾಡಿದ್ದರು. ಆ ಸಂಗತಿಯನ್ನು ಮಾತುಕತೆಯ ವೇಳೆ ಹಿರಿಯರಾದ ಕೃಷ್ಣ ಅವರೇ ನೆನೆಸಿಕೊಂಡರು. ನನ್ನನ್ನು ಆಶೀರ್ವಾದ ಮಾಡಿ ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದು ಹೇಳಿದರು.

ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರಿಗೆ ಉತ್ತರ ನೀಡಲು ನಾವು ಸಮರ್ಥನಿದ್ದೇನೆ. ನಾನು ಎಲ್ಲೂ ಕಾಣೆ ಆಗಿಲ್ಲ. ನಾನು ಇಲ್ಲೇ ಇದ್ದೇನೆ. ಈ ರೀತಿ ಅಪಪ್ರಚಾರ ಮಾಡಿ ಚುನಾವಣೆ ಯಶಸ್ವಿ ಆಗಲ್ಲ. ಅವರು ಇಂಥ ಪರೋಕ್ಷವಾಗಿ ಸೆಣಸುವ ಬದಲು ನೇರವಾಗಿ ಚುನಾವಣೆ ಮಾಡಲಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!