ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಯು ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಡೀಸೆಲ್ ವಾಹನಗಳು ಮತ್ತು ಜೆನ್ಸೆಟ್ಗಳ (ಡೀಸೆಲ್ ಜನರೇಟರ್) ಮೇಲೆ ‘ಮಾಲಿನ್ಯ ತೆರಿಗೆ’ ರೂಪದಲ್ಲಿ ಶೇ.10ರಷ್ಟು ಹೆಚ್ಚುವರಿ ಜಿಎಸ್‌ಟಿ ವಿಧಿಸಲು ಸಚಿವ ನಿತಿನ್ ಗಡ್ಕರಿ ಅವರು ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ ಹೇಳಿಕೆಗೆ ವರದಿಯಾಗಿದೆ.
ಆದ್ರೆ ಈ ಕುರಿತು ಖುದ್ದು ಸಚಿವರೇ ಸ್ಪಷ್ಟನೆ ಕೊಟ್ಟಿದ್ದು, ಇಂತಹ ಯಾವುದೇ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ವರದಿ ಬೆನ್ನಲ್ಲೇ ಸಚಿವ ನಿತಿನ್ ಗಡ್ಕರಿ ಸಾಮಾಜಿಕ ಜಾಲತಾಣದ ‘ಎಕ್ಸ್’ನಲ್ಲಿ ಸ್ಪಷ್ಟನೆ ನೀಡಿದ್ದಾರೆ.’ಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ ಶೇ.10ರಷ್ಟು ಜಿಎಸ್‌ಟಿಯನ್ನು ಸೂಚಿಸುವ ಮಾಧ್ಯಮ ವರದಿಗಳನ್ನು ಸ್ಪಷ್ಟಪಡಿಸುವ ತುರ್ತು ಅಗತ್ಯವಿದೆ. ಇಂತಹ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
2070ರ ವೇಳೆಗೆ ಕಾರ್ಬನ್ ನೆಟ್ ಶೂನ್ಯವನ್ನು ಸಾಧಿಸಲು ಮತ್ತು ಡೀಸೆಲ್‌ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ನಮ್ಮ ಬದ್ಧತೆಯಾಗಿದೆ. ಹಾಗೆಯೇ ಆಟೋಮೊಬೈಲ್ ಮಾರಾಟದಲ್ಲಿ ತ್ವರಿತ ಬೆಳವಣಿಗೆ, ಶುದ್ಧ ಮತ್ತು ಹಸಿರು ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ದೇಶದ ಬಹುತೇಕ ವಾಣಿಜ್ಯ ವಾಹನಗಳು ಪ್ರಸ್ತುತ ಡೀಸೆಲ್‌ನಿಂದ ನಡೆಯುತ್ತಿವೆ. ಪ್ರಯಾಣಿಕ ವಾಹನ ವಿಭಾಗದಲ್ಲಿ ಮಾರುತಿ ಸುಜುಕಿ ಇಂಡಿಯಾ ಮತ್ತು ಹೋಂಡಾ ಸೇರಿದಂತೆ ವಿವಿಧ ಕಾರು ತಯಾರಕರು ಈಗಾಗಲೇ ಡೀಸೆಲ್ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿದ್ದಾರೆ. ದೇಶದಲ್ಲಿ ಈಗಾಗಲೇ ಡೀಸೆಲ್ ಕಾರುಗಳ ಕೊಡುಗೆ ತೀವ್ರವಾಗಿ ಕುಸಿದಿದೆ. ಆದರೂ, ತಯಾರಕರು ಮಾರುಕಟ್ಟೆಯಲ್ಲಿ ಅವುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.