ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಟ್ರಕ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಹತ್ತು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಾಸಿಕ್-ಶಿರಡಿ ಹೆದ್ದಾರಿಯ ಪಥರೆ ಗ್ರಾಮದ ಬಳಿ ನಡೆದಿದೆ. ಬಸ್ ಬದ್ಲಾಪುರ ಮತ್ತು ಪಕ್ಕದ ಪ್ರದೇಶಗಳಿಂದ ಭಕ್ತರನ್ನು ಹೊತ್ತೊಯ್ದು ನಾಸಿಕ್ ಅಹಮದ್ನಗರ ರಸ್ತೆಯ ಮೂಲಕ ಸಾಯಿಬಾಬಾ ದರ್ಶನಕ್ಕಾಗಿ ಶಿರಡಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಹನ್ನೆರಡು ಮಂದಿ ಗಾಯಗೊಂಡಿದ್ದು, ಮೃತಪಟ್ಟವರಲ್ಲಿ ಆರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಬಸ್ಸಿನಲ್ಲಿ ಸುಮಾರು 45 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಮುಂಬೈನಿಂದ ಸುಮಾರು 180 ಕಿಮೀ ದೂರದಲ್ಲಿರುವ ನಾಸಿಕ್ನ ಸಿನ್ನಾರ್ ತೆಹಸಿಲ್ನ ಪಥರೆ ಶಿವರ್ ಬಳಿ ಬೆಳಿಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಸಿನ್ನಾರ್ ಗ್ರಾಮಾಂತರ ಆಸ್ಪತ್ರೆ ಮತ್ತು ಯಶವಂತ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ.