ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 6 ರಂದು ಒಲಿಂಪಿಕ್ಸ್ನಲ್ಲಿ ನಡೆದ ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ
ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ.
ನಿನ್ನೆಯಷ್ಟೇ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ ವಿನೇಶ್ ಫೋಗಟ್ ಮೇಲೆ ಇಂದು ಇಡೀ ದೇಶದ ಕಣ್ಣಿತ್ತು. ಫೋಗಟ್ ಯಾವುದೇ ಸೋಲು ಅನುಭವಿಸಿಲ್ಲ. ಪಂದ್ಯಕ್ಕೆ ತೆರಳುವ ಮುನ್ನವೇ ಅವರನ್ನು ಡಿಸ್‌ಕ್ವಾಲಿಫೈ ಮಾಡಲಾಗಿದೆ.
ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ಅವರು 100 ಗ್ರಾಂಗಿಂತ ತೂಕ ಹೆಚ್ಚಿರುವುದು ಪತ್ತೆಯಾಗಿದೆ. ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಈ ಕಾರಣದಿಂದಾಗಿ ಚಿನ್ನದ ಪದಕದ ಕನಸು ಕನಸಾಗಿಯೇ ಉಳಿದಿದೆ. ಕೋಟ್ಯಂತರ ಭಾರತೀಯರಿಗೆ ನಿರಾಸೆಯಾಗಿದೆ.