11 ಕೋಟಿ ಸಾಲ: ಹಾಸ್ಯ ನಟ ರಾಜ್​ಪಾಲ್ ಯಾದವ್ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಸಿಬಿಐ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಹಾಸ್ಯ ನಟ ರಾಜ್​ಪಾಲ್ ಯಾದವ್ ಸಂಕಷ್ಟಕ್ಕೆ ಸಿಲುಕಿದ್ದು, ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಸಾಲದ ಬದಲಾಗಿ ಸಿಬಿಐ ನವರು ರಾಜ್​ಪಾಲ್ ಯಾದವ್​ಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಂದಹಾಗೆ ಸಿಬಿಐ ಎಂದರೆ ತನಿಖಾ ಸಂಸ್ಥೆ ಅಲ್ಲ ಬದಲಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.

ರಾಜ್​ಪಾಲ್ ಯಾದವ್​ ಅವರಿಗೆ ಸೇರಿದ್ದು ಎನ್ನಲಾಗಿರುವ ಉತ್ತರ ಪ್ರದೇಶದ ಶಹಜಾನ್​ಪುರದಲ್ಲಿರುವ ಆಸ್ತಿಯನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

ಹಲವು ವರ್ಷಗಳ ಹಿಂದೆ ರಾಜ್​ಪಾಲ್ ಯಾದವ್ ಈ ಜಮೀನನ್ನು ಖರೀದಿ ಮಾಡಿದ್ದರು. ಅಸಲಿಗೆ ರಾಜ್​ಪಾಲ್ ಯಾದವ್ ಬಹಳ ವರ್ಷಗಳ ಹಿಂದೆ ತಮ್ಮ ಪೋಷಕರಾದ ನೌರಂಗ್ ಮತ್ತು ಗೋಧಾವರಿ ಅವರುಗಳ ಹೆಸರಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಆರಂಭ ಮಾಡಿದ್ದರು. ಅದಕ್ಕೆ ನೌರಂಗ್-ಗೋಧಾವರಿ ಎಂಟರ್ಟೈನ್​ಮೆಂಟ್ ಎಂದು ಹೆಸರಿಟ್ಟಿದ್ದರು.

ನೌರಂಗ್-ಗೋಧಾವರಿ ಎಂಟರ್ಟೈನ್​ಮೆಂಟ್ ನಿರ್ಮಾಣ ಸಂಸ್ಥೆಗೆ ರಾಜ್​ಪಾಲ್ ಯಾದವ್​ರ ಪತ್ನಿ ರಾಧಾ ಮಾಲಕಿ ಆಗಿದ್ದರು. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದರು . ಆ ಸಿನಿಮಾಕ್ಕೆ ಶಹಜಾನ್​ಪುರದ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡಿದ್ದರು. ಸಿನಿಮಾದಲ್ಲಿ ದಿವಂಗತ ಓಂ ಪುರಿ ಸಹ ನಟಿಸಿದ್ದರು. ಆ ಸಿನಿಮಾ ನಿರ್ಮಾಣಕ್ಕೆ ಶಹಜಾನ್​ಪುರದಲ್ಲಿನ ಜಮೀನು ಅಡವಿಟ್ಟು ಮೂರು ಕೋಟಿ ಸಾಲ ಪಡೆದಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಟ್ಟರ್ ಫ್ಲಾಪ್​ ಆಯ್ತು. ರಾಜ್​ಪಾಲ್ ಯಾದವ್​ಗೆ ಸಾಲ ಮರುಪಾವತಿ ಮಾಡಲು ಆಗಲಿಲ್ಲ.ಮೂರು ಕೋಟಿ ರೂಪಾಯಿ ಸಾಲ ಬಡ್ಡಿ, ಇನ್ನಿತರೆ ಶುಲ್ಕ, ದಂಡಗಳು ಸೇರಿಕೊಂಡು ಈಗ 11 ಕೋಟಿ ರೂಪಾಯಿಗಳಾಗಿದ್ದು, ನೊಟೀಸ್​ಗಳನ್ನು ಕಳಿಸಿ-ಕಳಿಸಿ ಸುಸ್ತಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ಇದೇ ತಿಂಗಳ ಎರಡನೇ ವಾರದಲ್ಲಿ ಶಹಜಾನ್​ಪುರಕ್ಕೆ ತೆರಳಿ ರಾಜ್​ಪಾಲ್ ಯಾದವ್​ ಅವರಿಗೆ ಸೇರಿದ ಅಡವಿಟ್ಟಿದ್ದ ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!