ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ಕೊಲೆ ಪ್ರಕರಣದ ತನಿಖೆಗೆ ಕೋರ್ಟ್ ಆದೇಶಿಸಿದ ಬೆನ್ನಲ್ಲೇ ಹಸೀನಾ ಮೇಲೆ ಬುಧವಾರ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿದೆ.
2015ರಲ್ಲಿ ವಕೀಲರೊಬ್ಬರನ್ನು ಅಪಹರಿಸಿದ ಆರೋಪದಲ್ಲಿ ಹಸೀನಾ ಮತ್ತು ಅವರ ಸಂಪುಟದ ಮಾಜಿ ಸಚಿವರು ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಢಾಕಾ ಮೆಟ್ರೊಪಾಲಿಟನ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಫರ್ಜಾನಾ ಶಕೀಲಾ ಸುಮು ಚೌಧರಿ ಅವರು ನಿರ್ದೇಶಿಸಿದ್ದಾರೆ.
ಈ ಪ್ರಕರಣದ ಸಂತ್ರಸ್ತ, ಸುಪ್ರೀಂ ಕೋರ್ಟ್ ವಕೀಲ ಸೊಹೆಲ್ ರಾಣಾ ದೂರು ಸಲ್ಲಿಸಿದ್ದಾರೆ ಎಂದು ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ.
ಹಸೀನಾ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಅಸಾದುಝಮಾನ್ ಖಾನ್, ಮಾಜಿ ಕಾನೂನು ಸಚಿವ ಅನಿಸುಲ್ ಹಕ್, ಮಾಜಿ ಐಜಿಪಿ ಶಾಹಿದುಲ್ ಹಕ್, ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್‌ನ (ಆರ್‌ಎಬಿ) ಮಾಜಿ ಡಿಜಿ ಬೆನಜೀರ್ ಅಹ್ಮದ್ ಮತ್ತು ಆರ್‌ಎಬಿಗೆ ಸಂಬಂಧಿಸಿದ 25 ಮಂದಿ ಅಪರಿಚಿತರ ವಿರುದ್ಧ ವಕೀಲನನ್ನು ಬಲವಂತವಾಗಿ ಕಣ್ಮರೆ ಮಾಡಿದ್ದ ಆಪಾದನೆಯ ದೂರು ದಾಖಲಾಗಿದೆ.
2015ರ ಫೆಬ್ರುವರಿ 10ರಂದು ನನ್ನನ್ನು ಉತ್ತರಾದಲ್ಲಿನ ಸೆಕ್ಟರ್ 5ರಿಂದ ಬಂಧಿಸಿದ್ದರು. ಬಲವಂತವಾಗಿ ವಾಹನಕ್ಕೆ ಹತ್ತಿಸಿಕೊಂಡು, ನನ್ನ ಕಿವಿಗಳು ಮತ್ತು ಜನನಾಂಗಕ್ಕೆ ವಿದ್ಯುತ್ ಶಾಕ್ ನೀಡಿದ್ದರು. ಇದರಿಂದ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ನಂತರವೂ ಹಲವು ದಿನಗಳ ಕಾಲ ಕ್ರೂರವಾಗಿ ಹಿಂಸಿಸಿದರು. ಅವರ ಚಿತ್ರಹಿಂಸೆಗಳನ್ನು ಸಹಿಸಿಕೊಂಡ ನಂತರ ಅಂತಿಮವಾಗಿ ಅದೇ ವರ್ಷದ ಆಗಸ್ಟ್‌ನಲ್ಲಿ ರಾಜ್‌ಶಾಹಿಯ ಗೋದಾಗರಿಯಲ್ಲಿ ನನ್ನನ್ನು ಬಿಡುಗಡೆ ಮಾಡಿದರು ಎಂದು ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.