ಪಶ್ಚಿಮ ಬಂಗಾಳದಲ್ಲಿ ʻಬ್ಲಾಕ್‌ ಫೀವರ್‌ʼ ಕೋಲಾಹಲ: 11 ಜಿಲ್ಲೆಗಳಲ್ಲಿ 65 ಪ್ರಕರಣಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊರೊನಾ, ಮಂಕಿಪಾಕ್ಸ್‌ ಕಾಯಿಲೆ ನಡುವೆ ಇದೀಗ ಪಶ್ಚಿಮ ಬಂಗಾಳದಲ್ಲಿ ʻಕಪ್ಪು ಜ್ವರʼ ಶುರುವಾಗಿದೆ.  ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ 65 ಕಪ್ಪು ಜ್ವರ (ಕಾಲಾ ಅಜರ್) ಪ್ರಕರಣಗಳು ವರದಿಯಾಗಿವೆ. ಕೇವಲ ಎರಡು ವಾರಗಳಲ್ಲಿ 65 ಪ್ರಕರಣಗಳು ದಾಖಲಾಗಿರುವುದರಿಂದ ಕಪ್ಪು ಜ್ವರದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಡಾರ್ಜಿಲಿಂಗ್, ಮಾಲ್ಡಾ, ಉತ್ತರ ದಿನಾಜ್‌ಪುರ, ದಕ್ಷಿಣ ದಿನಜ್‌ಪುರ ಮತ್ತು ಕಾಲಿಂಪಾಂಗ್ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾಲಾ ಅಜರ್ ಅನ್ನು ಈಗಾಗಲೇ ನಿರ್ಮೂಲನೆ ಮಾಡಿದ್ದೆವು ಆದರೆ, ಮತ್ತೆ  11 ಜಿಲ್ಲೆಗಳಲ್ಲಿ 65 ಪ್ರಕರಣಗಳು ದಾಖಲಾಗಿದ್ದು, ಮತ್ತೊಮ್ಮೆ ನಿರ್ಮೂಲನೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಬಿರ್ಭುಮ್, ಬಂಕುರಾ, ಪುರುಲಿಯಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಕಪ್ಪು ಜ್ವರ ಪ್ರಕರಣಗಳು ದಾಖಲಾಗಿವೆ. ಇದು ಮುಖ್ಯವಾಗಿ ಪರಾವಲಂಬಿ ಲೀಶ್ಮೇನಿಯಾ ಡೊನೊವಾನಿ ಸೋಂಕಿತ ಮರಳು ನೊಣಗಳ ಕಡಿತದಿಂದ ಹರಡುತ್ತದೆ, ಆದರೆ ಕೋಲ್ಕತ್ತಾದಲ್ಲಿ ಇದುವರೆಗೆ ಅಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದರು.

ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಕೆಲಸಕ್ಕೆ ಹೋಗಿ ವಾಪಸ್‌ ಬಂದವರಲ್ಲಿ ಈ ಜ್ವರ ಕಾಣಿಸಿಕೊಳ್ಳುತ್ತಿದೆ. ಅದೇ ಸಮಯದಲ್ಲಿ, ಬಾಂಗ್ಲಾದೇಶದಿಂದ ಬಂದ ಕೆಲವು ಜನರೂ ಸಹ ಈ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಈ ಕಾಯಿಲೆಯಿಂದ ಬಳಲುತ್ತಿರುವವರ ಆಸ್ಪತ್ರೆಯ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ರಾಜ್ಯ ಆಡಳಿತ ಸ್ಪಷ್ಟಪಡಿಸಿದೆ.

ಖಾಸಗಿ ಪ್ರಯೋಗಾಲಯ ಅಥವಾ ಆಸ್ಪತ್ರೆಯಲ್ಲಿ ಈ ಜ್ವರಕ್ಕೆ ಸಂಬಂಧಿಸಿದ ಸೋಂಕು ಪತ್ತೆಯಾದರೆ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ರೋಗಿಗಳಿಗೆ ಪೌಷ್ಟಿಕ ಆಹಾರ ನೀಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!