ಮೈಸೂರಿನಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮೈಸೂರು ಜಿಲ್ಲೆಯ ತಿ.ನರಸೀಪುರ ಗ್ರಾಮದಲ್ಲಿ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಚಿರತೆ ದಾಳಿಗೆ ಬಲಿಯಾಗಿ ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ಭಾನುವಾರ ಬೆಳಗ್ಗೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಬಾಲಕ ಜಯಂತ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಶೋಧ ಕಾರ್ಯ ಆರಂಭಿಸಿದ್ದರು. ರಾತ್ರಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು ಮತ್ತು ಭಾನುವಾರ ಬೆಳಿಗ್ಗೆ ಅದನ್ನು ಪುನರಾರಂಭಿಸಿದರು, ತದನಂತರ ಶವ ಪತ್ತೆಯಾಗಿದೆ. ಚಿರತೆ ಜಯಂತ್ ಮೇಲೆ ದಾಳಿ ಮಾಡಿರುವುದನ್ನು ಅರಣ್ಯಾಧಿಕಾರಿಗಳು ಪ್ರಾಥಮಿಕವಾಗಿ ಖಚಿತಪಡಿಸಿದ್ದಾರೆ.

ಕಳೆದೆರಡು ದಿನಗಳಲ್ಲಿ ಇದು ಎರಡನೇ ಚಿರತೆ ದಾಳಿಯಾಗಿದ್ದು, ತಾಲೂಕಿನಲ್ಲಿ ಚಿರತೆ ದಾಳಿಗೆ ಇದು ನಾಲ್ಕನೇ ಬಲಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸಂಜೆ ಉರುವಲು ತರಲು ತೆರಳಿದ್ದ ತಿ. ನರಸೀಪುರ ತಾಲೂಕಿನ ಕನ್ನಾಯಕನಹಳ್ಳಿ ನಿವಾಸಿ ಸಿದ್ದಮ್ಮ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದ್ದು, ಶನಿವಾರ ಆಕೆಯ ಶವ ಪತ್ತೆಯಾಗಿದೆ.

ಅಕ್ಟೋಬರ್ 31 ರಂದು ಮಡಗರ ಲಿಂಗಯ್ಯನವರ ನಿವಾಸಿ ಮಂಜುನಾಥ್ (18) ಮತ್ತು ಡಿಸೆಂಬರ್ 1 ರಂದು ಮೇಘನಾ (22) ಚಿರತೆ ದಾಳಿಗೆ ಬಲಿಯಾಗಿದ್ದರು.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಭಾನುವಾರ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶನಿವಾರ ರಾತ್ರಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಟಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್ ಎಂ ಮತ್ತು ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು ಹೊರನಹಳ್ಳಿ ಗ್ರಾಮಕ್ಕೆ ಆಗಮಿಸಿ ಚಿರತೆಯನ್ನು ಆದಷ್ಟು ಬೇಗ ಹಿಡಿಯುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!