ಹೊಸದಿಗಂತ ವರದಿ ಮಡಿಕೇರಿ:
ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಕೊಡಗಿನ 39,597 ರೈತರಿಗೆ 113 ಕೋಟಿ ರೂ.ಪರಿಹಾರ ಹಂಚಿಕೆ ಮಾಡಲಾಗಿದೆ. ಆ ಮೂಲಕ ಸರ್ಕಾರ ರೈತರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದೆ ಎಂದು ಕೊಡಗು ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಅಕಾಲಿಕ ಮಳೆಯಿಂದಾಗಿ ಕಾಫಿ, ಮೆಣಸು, ಅಡಿಕೆ, ಕೊಕ್ಕೊ ಮತ್ತಿತರ ಬೆಳೆಗಳು ಸಂಪೂರ್ಣವಾಗಿ ಹಾನಿಗೀಡಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದ ಕೃಷಿಕ ವರ್ಗದ ಖಾತೆಗೆ ಸರ್ಕಾರ ಏಕಕಾಲದಲ್ಲಿ ಪರಿಹಾರ ಜಮಾ ಮಾಡಿದೆ ಎಂದರು.
ರೈತರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕರುಗಳು ಪರಿಹಾರದ ಕುರಿತು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿದ ಪರಿಣಾಮ ದೊಡ್ಡ ಪ್ರಮಾಣದ ಪರಿಹಾರ ವಿತರಣೆಯಾಗಿದೆ. ಶಾಸಕರು ಹಾಗೂ ಸರ್ಕಾರಕ್ಕೆ ನಷ್ಟದ ವರದಿ ನೀಡಿದ ಕಂದಾಯ ಅಧಿಕಾರಿಗಳು ಶ್ಲಾಘನಾರ್ಹರು ಎಂದು ತಿಳಿಸಿದರು.
ಕೃಷಿಗೆ ಸಹಾಯಧನ ನೀಡಲಾಗುತ್ತಿದ್ದು, ಬೆಳೆಗಾರರು ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅರ್ಜಿ ಸಲ್ಲಿಸಲು ಅವಕಾಶ: ಅಕ್ರಮ-ಸಕ್ರಮ ಅರ್ಜಿ ಸಲ್ಲಿಸಲು ಮೇ ತಿಂಗಳ ವರೆಗೆ ಅವಕಾಶ ಕಲ್ಪಿಸಲಾಗಿದ್ದು, ಭೂಮಿ ದಾಖಲಾತಿ ಮಾಡಿಕೊಳ್ಳುವವರು ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳುವಂತೆ ತಿಳಿಸಿದರು.
ರಾಜ್ಯ ರೈತ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯೆ ಯಮುನಾ ಚಂಗಪ್ಪ ಮಾತನಾಡಿ, ತಾಂತ್ರಿಕ ಕಾರಣದಿಂದಾಗಿ, ಕೆಲವರಿಗೆ ಪರಿಹಾರ ದೊರೆತಿಲ್ಲ. ಅಧಿಕಾರಿಗಳಿಗೆ ಅಗತ್ಯ ದಾಖಲೆ ಒದಗಿಸಿ ಪರಿಹಾರ ಪಡೆಯುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕುಂದಳ್ಳಿ ಹಾಗೂ ಕಬೀರ್ ದಾಸ್ ಉಪಸ್ಥಿತರಿದ್ದರು.