ಹೊಸದಿಗಂತ ವರದಿ, ಮಂಗಳೂರು:
ಮಂಗಳೂರು ನಗರದ ಹೊರವಲಯದ ಪಡೀಲ್‌ನಲ್ಲಿ 2012 ರಲ್ಲಿ ನಡೆದಿದ್ದ ಹೋಂ ಸ್ಟೇ ದಾಳಿಗೆ ಕಾರಣವಾಗಿದ್ದ 39 ಮಂದಿ ಆರೋಪಿಗಳು ದೋಷಮುಕ್ತರಾಗಿದ್ದಾರೆ.
ಮಂಗಳವಾರ ಮಂಗಳೂರಿನ ಜಿಲ್ಲಾ ಆರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಒಟ್ಟು 44 ಮಂದಿ ಆರೋಪಿಗಳಿದ್ದು, ಈ ಪೈಕಿ 3 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಈಗಾಗಲೇ ನ್ಯಾಯಾಲಯ ಜಾಮೀನು ನೀಡಿತ್ತು. ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಕೂಡ ಈ ಹಿಂದೆಯೇ ದೋಷಮುಕ್ತಗೊಳಿಸಲಾಗಿತ್ತು.
2012 ಜು.28 ರಂದು ದಾಳಿಯಾಗಿತ್ತು
2012 ರ ಜುಲೈ 28 ರಂದು ಹಿಂದೂ ಸಂಘಟನೆಯ ನೇತೃತ್ವದಲ್ಲಿ ದಾಳಿಯಾಗಿತ್ತು. ಹೋಂ ಸ್ಟೇಯಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಲಾಗಿತ್ತು.
ಅನ್ಯಕೋಮಿನ ಯುವಕ ಯುವತಿಯರು ಹೋಂ ಸ್ಟೇನಲ್ಲಿ ತಂಗಿದ್ದು, ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ತೀವ್ರತರದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಪಾರ್ಟಿ ನಿರತ ಯುವತಿಯರಲ್ಲಿ ಇಬ್ಬರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮಗಳೂ ಇದ್ದದ್ದು ವಿಶೇಷ. ಘಟನೆ ನಡೆದ ಬಳಿಕ ರಾಜಕೀಯವಾಗಿ ಅತೀ ಹೆಚ್ಚು ಕೆಸರೆರಚಾಟಕ್ಕೂ ಈ ಘಟನೆ ಸಾಕ್ಷಿಯಾಗಿತ್ತು.
ಅಂತಿಮವಾಗಿ ಪೊಲೀಸರು 44 ಮಂದಿಯ ಮೇಲೆ ಆರೋಪ ಪಟ್ಟಿಯನ್ನು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದಾಳಿ ಘಟನೆಯನ್ನು ಚಿತ್ರೀಕರಿಸಲು ತೆರಳಿದ್ದ ಇಬ್ಬರು ಮಾಧ್ಯಮದ ವ್ಯಕ್ತಿಗಳ ಹೆಸರನ್ನು ಕೂಡಾ ಅವರು ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಘಟನೆ ನಡೆದು ದೀರ್ಘ ವಿಚಾರಣೆ ಬಳಿಕ ಅಂದರೆ 12 ವರ್ಷದ ಬಳಿಕ ಎಂತಿಮ ತೀರ್ಪು ಹೊರಬಿದ್ದಿದೆ.