ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಸ್ಕಿ: ತಾಲೂಕಿನ ಪಾಮನಕಲ್ಲೂರಿನಲ್ಲಿ ಪುರಾತನ ಅವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಚನ್ನಬಸಪ್ಪ ಮಲಂದಿನ್ನಿ ಶೋಧಿಸಿದ್ದಾರೆ.
ಈ ಗ್ರಾಮದಲ್ಲಿ 6 ವೀರಗಲ್ಲುಗಳು, ಶಕ್ತಿಶಿಲ್ಪ, ವೀರಭದ್ರೇಶ್ವರ, ಮಾರುತಿ, ಆದಿಬಸವಣ್ಣ, ದ್ಯಾವಮ್ಮ ದುರ್ಗಮ್ಮ ದೇವಾಲಯಗಳು, ಹಲವು ನಾಗ ಶಿಲ್ಪಗಳು, ಮಾಹೇಬನ ಬಾವಿ ಮೊದಲಾದ ಅವಶೇಷಗಳು ಕಂಡು ಬಂದಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ಶಿವಾನಂದ ಮಠದಲ್ಲಿ ಕಪ್ಪು ಶಿಲೆಯ ತಟಿತ ಶಾಸನ ಪತ್ತೆಯಾಗಿದೆ. ಇದು ಕನ್ನಡ ಲಿಪಿಯಲ್ಲಿದು ಒಟ್ಟು 51 ಸಾಲುಗಳಿಂದ ರಚಿತಗೊಂಡಿದೆ. ಈ ಶಾಸನ 1197ರ ಕಾಲ ಘಟಕ್ಕೆ ಸೇರಿದ್ದು, ಇದರಲ್ಲಿ ಸೇವುಣ ವಂಶದ ಜೈತುಗಿ ದೇವನು (1191-1199) ರಾಜ್ಯಭಾರ ಮಾಡುವ ಕಾಲದಲ್ಲಿ ಈತನ ಸಾಮಂತ ಅರಸನಾಗಿ ಮೊರಟದ ( ಪ್ರಸ್ತುತ ಮಲ್ಲಟಗ್ರಾಮ, ಸಿರವಾರ ತಾಲೂಕು) ಹೈಹಯ ವಂಶದ ಇಮ್ಮಡಿ ಮಲ್ಲಿದೇವರಸನಿದ್ದನು. ತನು ಮೊರಟ ಮತ್ತು ಅಯ್ಯಣವಾಡಿ ಎರಡು ವಿಭಾಗಗಳನ್ನು ಆಳ್ವಿಕೆ ಮಾಡುತ್ತಿರುವಾಗ, ಈತನ ಪಟ್ಟದ ರಾಣಿಯಾಗಿ ಮಾಕಲದೇವಿ ಇದ್ದಳು. ಈ ಮಲ್ಲಿದೇವರಸನು ತನ್ನ ತಂದೆ ಹಲ್ಲೇಗದೇವನ ಹೆಸರಿನಲ್ಲಿ ಹಲ್ಲೇಶ್ವರ ಲಿಂಗ ಪ್ರತಿಷ್ಠಾಪನೆ ಮಾಡಿ ದೇವಾಲಯ ಕಟ್ಟಿಸಿದನು. ಈ ದೇವಾಲಯದ ರೂಪ-ದೀಪಕ್ಕೆ ಎಣ್ಣೆ ಗಾಣವನ್ನು ದಾನವಾಗಿ ನೀಡಿದನು. ಇದರೊಂದಿಗೆ ಶಾಸನದಲ್ಲಿ ಕಾಮಯ್ಯ, ಮಾದಯ್ಯ, ಹಲ್ಲಯ್ಯರೆಂಬ ವ್ಯಕ್ತಿಗಳು, ಸೆಟ್ಟಿಗಳು, ಬಾಡುಕಾಯಿ, ಕೌತಳದ ಬೆಳೆ ಮೊದಲಾದವುಗಳು ಉಲ್ಲೇಖಗೊಂಡಿವೆ.
ಈ ಗ್ರಾಮದ ಕ್ಷೇತ್ರ ಕಾರ್ಯದಲ್ಲಿ ಸ್ಥಳೀಯರಾದ ಬಸವರಾಜ ಕಲ್ಲೂರು ನಿವೃತ್ತ ಪೋಸ್ಟ್ ಮಾಸ್ಟರ್, ಚನ್ನಬಸವ ವಸ್ತ್ರದ, ಅಯ್ಯಪ್ಪ ಉಪನ್ಯಾಸಕರು, ಭೀಮಾಶಪ್ಪ ಈಳಿಗೇರು, ಶಿವಗ್ಯಾನಪ್ಪ ಚೌಡಿ, ತಿಪ್ಪಣ ಅರಕೇರ ಮೊದಲಾದವರು ನೆರವಾಗಿದ್ದರೆಂದು ಸಂಶೋಧಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.