ವಿಶ್ವಶಾಂತಿ ಸಂದೇಶ ಸಾರಿದ ಯಕ್ಷಗಾನ ಕಲಾವಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿರಸಿ: ಕಳೆದ ಏಳು ವರ್ಷಗಳಿಂದ ನಿರಂತರ ವಿಶ್ವಶಾಂತಿ ಸಂದೇಶ ಸಾರುವ ಯಕ್ಷನೃತ್ಯ ರೂಪಕದ ಬಾಲಕಿ ತುಳಸಿ ಹೆಗಡೆ ಸಾಧನೆ ಇದೀಗ ದೇಶದ ಪ್ರತಿಷ್ಠಿತ ಇಂಡಿಯಾ ಬುಕ್ ರೆಕಾರ್ಡನಲ್ಲಿಯೂ ದಾಖಲಾಗಿದೆ. ವಿಶ್ವಶಾಂತಿ ಸಂದೇಶದ ಕಲಾ ಪ್ರದರ್ಶನ ನೀಡುವ ದೇಶದ ಏಕಮೇವ ಬಾಲಕಿಯಾಗಿ ಹೊರಹೊಮ್ಮಿದ್ದಾಳೆ.

ಅತ್ಯಂತ ಕಿರಿಯ ವಯಸ್ಸಿನಲ್ಲೇ ತುಳಸಿ ಹೆಗಡೆ ಒಂದು ಗಂಟೆಗೂ ಅಧಿಕ ಕಾಲದ ಯಕ್ಷನೃತ್ಯ ರೂಪಕ ಪ್ರಸ್ತುತಗೊಳಿಸುತ್ತಿದ್ದಾಳೆ. 13 ವಯಸ್ಸಿನ ತುಳಸಿ ಕಳೆದ ಏಳು ವರ್ಷಗಳಿಂದ ಸತತ ವಿವಿಧ ಪೌರಾಣಿಕ ಕಥೆ ಒಳಗೊಂಡ ವಿಶ್ವಶಾಂತಿ ಸರಣಿ ಪ್ರಸ್ತುತಗೊಳಿಸುವ ಬಾಲಕಿ ಎಂದೇ ಪ್ರಸಿದ್ಧಿ ಪಡೆದಿದ್ದಾಳೆ. ತುಳಸಿ ಹೆಗಡೆಯ ಈ ವಿಶಿಷ್ಟ ಸಾಧನೆಯನ್ನು ಅತ್ಯಂತ ಕಿರಿಯ ವಯಸ್ಸಿನಿಂದ ವಿಶ್ವಶಾಂತಿ ಸರಣಿ ಸಂದೇಶ ಸಾರುವ ಬಾಲ ಯಕ್ಷಗಾನ ಕಲಾವಿದೆ ಎಂದೇ ಇಂಡಿಯಾ ಬುಕ್ ಆಫ್ ರೆಕಾರ್ಡ ನೀಡುವ ಪ್ರಮಾಣ ಪತ್ರದಲ್ಲೂ ಉಲ್ಲೇಖಿಸಿದೆ.

ಕಳೆದ ಏ. 27ರಂದು ದಾಖಲಿಸಿಕೊಂಡ ಇಂಡಿಯಾ ಬುಕ್ ಆಫ್ ರೆಕಾರ್ಡ ಸಂಸ್ಥೆ ತುಳಸಿ ಯಕ್ಷಗಾನದ ಕಲಾ ಮಾಧ್ಯಮದ ಮೂಲಕ ಜಗತ್ತಿನ ಯೋಗಕ್ಷೇಮದ ಪ್ರಸ್ತುತಿಗಾಗಿ ಈ ರೂಪಕ ಪ್ರದರ್ಶಿಸುತ್ತಿದ್ದಾಳೆ ಎಂದು ಹೆಮ್ಮೆ ವ್ಯಕ್ತಪಡಿಸಿದೆ. ತುಳಸಿ ಮುಮ್ಮೇಳದ ಏಕವ್ಯಕ್ತಿ ರೂಪಕ ಇದಾಗಿದ್ದು, ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರ, ನಿರ್ದೇಶಕರ, ಸಾಹಿತಿಗಳ, ಪರಿಣಿತರ ಒಂಬತ್ತು ಜನರ ತಂಡ ಕೆಲಸ ಮಾಡುತ್ತಿದೆ. ಒಂದು ಗಂಟೆಗೂ ಮಿಕ್ಕಿದ ವಿಶ್ವಶಾಂತಿ ಸಂದೇಶ, ವಿಶ್ವಶಂಕರಾಕ್ಷರ, ಶ್ರೀಕೃಷ್ಣಂ ವಂದೇ, ವಂದೇ ಪರಮಾನಂದಂ, ಪಂಚಪಾವನ ಕಥಾ, ಪರಿವರ್ತನೆ ಜಗದ ನಿಯಮ, ವಂಶಿ ವಿಲಾಸ ಯಕ್ಷನೃತ್ಯ ರೂಪಕಗಳನ್ನು ತುಳಸಿ ಪ್ರಸ್ತುತಗೊಳಿಸುತ್ತಿದ್ದಾಳೆ. ಯಕ್ಷಗಾನದ ನೃತ್ಯ ಭಾಷೆ ಬಳಸಿಕೊಂಡು ರೂಪಕ ಪ್ರದರ್ಶಿಸುವ ಈಕೆಯ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ದಾಖಲಾಗಿದ್ದು, ಯಕ್ಷಗಾನದ ಇತಿಹಾಸದಲ್ಲೂ ಪ್ರಥಮದ್ದಾಗಿದೆ.

ತುಳಸಿ ಹೆಗಡೆಗೆ ಇತ್ತೀಚೆಗೆ ಪೂನಾದ ಇಂಡಿಯನ್ ಸ್ಟಾರ್ ಐಕಾನ್ ಪ್ರಶಸ್ತಿ ಕೂಡ ಲಭಿಸಿದೆ. ತುಳಸಿಯ ಸಾಧನೆಗೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದಿಸಿ ಶುಭ ಕೋರಿದ್ದಾರೆ. ಸದ್ಯ ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ತುಳಸಿ ವ್ಯಾಸಂಗ ಮಾಡುತ್ತಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಲಿ ಎಂದು ಅನೇಕರು ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!