ಕೊಡಗಿಗೆ ಲಭ್ಯವಾಗದ ಸೀಮೆಎಣ್ಣೆ- ಅಸಮಾಧಾನ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯ ಪಡಿತರ ಚೀಟಿದಾರರಿಗೆ ಮಳೆಗಾಲದ ಅವಧಿಯಲ್ಲಿ ಸೀಮೆಎಣ್ಣೆ ಸರಬರಾಜು ಮಾಡುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರ ರವಾನೆಯಾಗಿದ್ದರೂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಇದುವರೆಗೆ ಯಾವುದೇ ಕ್ರಮವಾಗದಿರುವ ಬಗ್ಗೆ ಸಹಕಾರ ಭಾರತಿ ಉಪಾಧ್ಯಕ್ಷ ಎನ್.ಎ.ರವಿಬಸಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಆಹಾರ ನಾಗರಿಕ ಸರಬರಾಜು ಮತ್ತು‌ ಗ್ರಾಹಕರ ವ್ಯವಹಾರಗಳ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ರವಿ ಬಸಪ್ಪ ಪತ್ರ ಬರೆದಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸುಮಾರು 6 ತಿಂಗಳು ಮಳೆಯಿಂದ ಕೂಡಿದ ವಾತಾವರಣವಿರುವ ಕಾರಣ ಪ್ರತಿ ಕಾರ್ಡಿಗೂ 2 ಲೀಟರ್ ಸೀಮೆಎಣ್ಣೆ ಸರಬರಾಜು ಮಾಡಬೇಕೆಂದು ಕೋರಿ ಜಿಲ್ಲೆಯ ಸಾರ್ವಜನಿಕರ ಪರವಾಗಿ ಸಹಕಾರ ಭಾರತಿ ವತಿಯಿಂದ ಮೇ 23 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಅದರಂತೆ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿಗಳು ಮೇ 25ರಂದು ಸೂಕ್ತ ಕ್ರಮಕ್ಕಾಗಿ ಪತ್ರ ಕಳುಹಿಸಿದ್ದರು. ಆದರೆ ಇಲಾಖೆಯಿಂದ ಈವರೆಗೂ ಯಾವುದೇ ಕ್ರಮವಾಗದಿರುವ ಬಗ್ಗೆ ರವಿಬಸಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭವಾಗುವ ಸಂಭವವಿರುವುದರಿಂದ ತಾವುಗಳು ಆದಷ್ಟು ಬೇಗ ಸೀಮೆಎಣ್ಣೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!