ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ರಾಮನವಮಿ ಮೆರವಣಿಗೆಯ ನಂತರ ಬಿಹಾರದ ನಳಂದದ ಲಾಹೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಗನ್ ದಿವಾನ್ ಬಳಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡುವೆ ಕನಿಷ್ಠ 14 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“14 ಜನರಲ್ಲಿ 4 ಜನರಿಗೆ ಗುಂಡು ತಗುಲಿದ್ದು, ಅದರಲ್ಲಿ 3 ಜನರನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ, ಒಬ್ಬ ವ್ಯಕ್ತಿಯನ್ನು ICU ಗೆ ದಾಖಲಿಸಲಾಗಿದೆ” ಎಂದು ಡಾ ವಿಶ್ವಜೀತ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ, ರಾಮನವಮಿ ಮೆರವಣಿಗೆಯ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಯೂ ನಡೆದಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ವಿವರಗಳನ್ನು ಸಿಸಿಟಿವಿ ದೃಶ್ಯಾವಳಿ, ಡ್ರೋನ್ ಕ್ಯಾಮರಾ ಮತ್ತು ವಿಡಿಯೋಗ್ರಫಿ ಮೂಲಕ ಪಡೆಯುತ್ತಿದ್ದೇವೆ ಎಂದು ನಳಂದ ಡಿಎಂ ಶಶಾಂಕ್ ಶುಭಂಕರ್ ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗುವುದು. ಅವರನ್ನು ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನಗರದಾದ್ಯಂತ 144 ಸೆಕ್ಷನ್ ವಿಧಿಸಲಾಗಿದ್ದು, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಹೆಚ್ಚಿನ ತನಿಖೆ ನಡೆಯುತ್ತಿದೆ.