ಹೊಸದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿರುವವರ ಬೇಟೆ ಮುಂದುವರಿಸಿರುವ ಪೊಲೀಸರು ಒಂದೇ ದಿನದಲ್ಲಿ ಸುಂಟಿಕೊಪ್ಪ ಹಾಗೂ ಕುಶಾಲನಗರದಲ್ಲಿ ಒಟ್ಟು 14 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಮೂರು ಕೆ.ಜಿ.ಗೂ ಅಧಿಕ ಪ್ರಮಾಣದ ಗಾಂಜಾ ಹಾಗೂ ಏಳು ಗ್ರಾಂ.ಗೂ ಅಧಿಕ ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣೆ ಸರಹದ್ದಿನ ಸುಂಟಿಕೊಪ್ಪ ಮಾರುಕಟ್ಟೆ ಬಳಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗುರುವಾರ ದಾಳಿ ನಡೆಸಿದ ಪೊಲೀಸರು, ಸುಂಟಿಕೊಪ್ಪ ನಿವಾಸಿಗಳಾದ ರಫೀಕ್ (40) ನಯನ್ (25) ಮೊಹಮ್ಮದ್ ಮುಕ್ರಮ್ (40) ಅಭಿಷೇಕ್ (20) ಹಾಗೂ ಮೂರ್ನಾಡು ನಿವಾಸಿ ಹತೀಕ್.ಎಂ.ಬಿ(34) ಎಂಬವರನ್ನು ಬಂಧಿಸಿ, ಅವರಿಂದ 1 ಕೆ.ಜಿ. 65 ಗ್ರಾಂ ಗಾಂಜಾ ಮತ್ತು 2.5 ಗ್ರಾಂ ಎಂಡಿಎಂಎ ನಿಷೇಧಿತ ಮಾದಕ ವಸ್ತು ಹಾಗೂ ಮೂರು ಲಕ್ಷ ರೂ.ಮೌಲ್ಯದ ಗೂಡ್ಸ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.ಇವುಗಳ ಒಟ್ಟು ಮೌಲ್ಯ 3.30ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಮತ್ತೊಂದೆಡೆ ಕುಶಾಲನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಬಡವಾಣೆ ಬಳಿ ಹಾಗೂ ಪ್ರಥಮ ದರ್ಜೆ ಕಾಲೇಜು ಸಮೀಪದ ವಾಲ್ಮೀಕಿ ಭವನದ ಹತ್ತಿರ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿ ಕುಶಾಲನಗರ ಪೊಲೀಸರು, ಕೇರಳ ರಾಜ್ಯದ ಸಿಜಿನ್ ಮಂಗಳಸೇರಿ ಮತ್ತು ಸೋಮವಾರಪೇಟೆ ಕಲ್ಕಂದೂರು ನಿವಾಸಿಗಳಾದ. ಮುಸ್ತಾಫಾ (40), ಹಕೀಂ (23), ಗುಮ್ಮನಕೊಲ್ಲಿ ನಿವಾಸಿಗಳಾದ ವಿನೋದ್ (41) ಹಾಗೂ ಶಂಕರ (41) ಎಂಬವರನ್ನು ಬಂಧಿಸಿ 1 ಕೆ.ಜಿ. 75 ಗ್ರಾಂ ಗಾಂಜಾ ಮತ್ತು 5.6 ಗ್ರಾಂ ಎಂಡಿಎಂಎ ನಿಷೇಧಿತ ಮಾದಕ ವಸ್ತುವನ್ನು ವಶಪಡಿಕೊಂಡಿದ್ದಾರೆ.
ಕುಶಾಲನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಗುಡ್ಡೆಹೊಸೂರುನಿಂದ ಸಿದ್ದಾಪುರ ಕಡೆಗೆ ಹೋಗುವ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಹೊಸತೋಟ ನಿವಾಸಿಗಳಾದ ಫೈಜಲ್.ಕೆ.ಹೆಚ್(30) ಶರೀಫ್ (32) ಗೊಂದಿಬಸವನಹಳ್ಳಿ ನಿವಾಸಿ ಜಿ.ಎ. ಶಶಿಕುಮಾರ್ (31)ಹಾಗೂ ಗುಡ್ಡೆಹೊಸೂರು ನಿವಾಸಿ ವಿನೀಶ್ (28) ಎಂಬವರನ್ನು ಬಂಧಿಸಿ 1 ಕೆ.ಜಿ. 160 ಗ್ರಾಂ ಗಾಂಜಾ, 6.5 ಗ್ರಾಂ ಎಂಡಿಎಂಎ ನಿಷೇಧಿತ ಮಾದಕ ವಸ್ತುವನ್ನು ವಶಪಡಿಕೊಂಡಿದ್ದಾರೆ.
ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್’ಪಿ ಆರ್.ವಿ.ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ನೇತೃತ್ವದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಕುಶಾಲನಗರ ನಗರ ಠಾಣಾಧಿಕಾರಿ ರವೀಂದ್ರ, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಪಿ.ಪಿ.ಮೋಹನ್’ರಾಜು ಹಾಗೂ ಮೂರೂ ಠಾಣೆಗಳ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಪ್ರಕರಣಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದು, ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ, ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.