ಹೊಸದಿಗಂತ ವರದಿ ಮಡಿಕೇರಿ:
ಆಸ್ತಿ ವಿವಾದದ ಹಿನ್ನಲೆಯಲ್ಲಿ ತಮ್ಮಂದಿರೇ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಕುದ್ರೆಪಾಯ ನಿವಾಸಿಯಾಗಿದ್ದು, ಹಾಲಿ ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದ ಉಸ್ಮಾನ್ ಎಂಬವರೇ ಹತ್ಯೆಯಾದ ದುರ್ದೈವಿ.
ಉಸ್ಮಾನ್, ಸತ್ತಾರ್, ರಫೀಕ್, ಇಸುಬು, ಅಬ್ಬಾಸ್, ಮೊದಲಾದ ಅಣ್ಣತಮ್ಮಂದಿರರಿಗೆ ಸಂಪಾಜೆ ಹೋಬಳಿಯ ಕುದ್ರೆಪಾಯದಲ್ಲಿ ಸುಮಾರು 50 ಎಕರೆಯಷ್ಟು ಕೃಷಿ ಭೂಮಿ ಇದೆ ಎನ್ನಲಾಗಿದ್ದು, ಈ ಜಮೀನಿನ ಹಿನ್ನೆಲೆಯಲ್ಲಿ ಅಣ್ಣ ತಮ್ಮಂದಿರ ನಡುವೆ ವಿವಾದ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಶುಕ್ರವಾರ ಉಸ್ಮಾನ್ ಅವರು ತಮ್ಮ ಜಮೀನಿಗೆ ತೆರಳುತ್ತಿದ್ದ ಸಂದರ್ಭ ಅವರ ಸಹೋದರರು ಚಾಕುವಿನಿಂದ ಇರಿದು ಕೊಂದಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಸಂಪಾಜೆ ಉಪ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.