ಹೊಸದಿಗಂತ ವರದಿ, ಮಡಿಕೇರಿ:
ಹುದಿಕೇರಿಯಿಂದ ಬಿರುನಾಣಿಗೆ ಹೈಸೂಡ್ಲೂರು- ಪೊರಾಡು ಗ್ರಾಮದ ಮೂಲಕ ಗ್ರಾಮ ಸಡಕ್ ಯೋಜನೆಯಲ್ಲಿ 6 ವರ್ಷದ ಹಿಂದೆ ನಿರ್ಮಾಣವಾಗಿರುವ ಸಂಪರ್ಕ ರಸ್ತೆ ತೀವ್ರವಾಗಿ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತುಂಬಾ ಕಷ್ಟವಾಗುತ್ತಿದೆ. ಮುಂದಿನ 15ದಿನಗಳ ಒಳಗಾಗಿ ರಸ್ತೆ ಮರು ಡಾಂಬರೀಕರಣ ಮಾಡದಿದ್ದಲ್ಲಿ ಹುದಿಕೇರಿ ಬಳಿ ಪೊನ್ನಂಪೇಟೆ-ಶ್ರೀಮಂಗಲ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮ ಸಡಕ್ ಯೋಜನೆಯ ನಿಯಮದಂತೆ ಕಳೆದ ವರ್ಷ ರಸ್ತೆಯನ್ನು ಮರು ಡಾಂಬರೀಕರಣ ಮಾಡಬೇಕಾಗಿದ್ದರೂ ಮಾಡಿಲ್ಲ. ಇದುವರೆಗೆ ಸಂಬಂಧಿಸಿದ ಗುತ್ತಿಗೆದಾರ ನಿರ್ವಹಣೆ ಮಾಡುತ್ತಿಲ್ಲ. ಇಲಾಖಾಧಿಕಾರಿಗಳು ಸ್ಪಂದಿಸುತ್ತಿಲ್ಲ. ನಿಯಮದಂತೆ ನಿರ್ವಹಣೆ ಮಾಡದೇ ಹಣ ಕಬಳಿಸುವ ಸಂಶಯವಿದೆ ಎಂದು ಆರೋಪಿಸಿದ್ದಾರೆ.
ಹುದಿಕೇರಿಯಿಂದ ಬಿರುನಾಣಿಗೆ ಸಂಪರ್ಕ ರಸ್ತೆಯಾಗಿರುವ ಈ 8 ಕಿ.ಮೀ.ರಸ್ತೆಯು ಪ್ರಸಿದ್ಧ ಮೃತ್ಯುಂಜಯ ದೇವಸ್ಥಾನಕ್ಕೂ ಸಹ 12 ಕಿ.ಮೀ. ರಷ್ಟು ಅಂತರವನ್ನು ಕಡಿಮೆ ಮಾಡುತ್ತದೆ ಹಾಗೂ ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಐದು ಗ್ರಾಮಗಳಿಗೂ ಸಹ ಅಂತರ ಕಡಿಮೆ ಮಾಡುವ ಈ ರಸ್ತೆ ಹದಗೆಟ್ಟಿರುವುದರಿಂದ ಶಿಕ್ಷಣ ಸಂಸ್ಥೆಯ ಬಸ್ಸುಗಳು, ಹಾಗೂ ಶಾಲಾ, ಸಾರ್ವಜನಿಕರ ಸೇರಿದಂತೆ ದಿನ ನಿತ್ಯ ನೂರಾರು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಸ್ಥಳೀಯ ಜನರು, ದೇವಸ್ಥಾನಕ್ಕೆ ಬರುವ ನೂರಾರು ಭಕ್ತಾದಿಗಳು ಸಹ ರಸ್ತೆ ಗುಂಡಿ ಬಿದ್ದಿರುವುದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಸಕಾಲದಲ್ಲಿ ಅಂದರೆ ಕಳೆದ ವರ್ಷ ಮಾರ್ಚ್ ತಿಂಗಳೊಳಗೆ ಈ ರಸ್ತೆಯನ್ನು ಮರು ಡಾಂಬರೀಕರಣ ಮಾಡಿದ್ದರೆ ಇಷ್ಟು ಹದಗೆಡುತ್ತಿರಲಿಲ್ಲ. ರಸ್ತೆ ಹದಗೆಟ್ಟಿರುವುದರಿಂದ ವಾಹನಗಳು ಹಾನಿಯಾಗುತ್ತಿದ್ದು, ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ, ವಾಹನಗಳ ಮೈಲೇಜ್ ಕಡಿತವಾಗುತ್ತಿದೆ ಹಾಗೂ ಪ್ರಯಾಣದ ಸಮಯ ಸಹ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪರ ಮಾತನಾಡಿದ ಮಾಜಿ ಸೈನಿಕ ಅಣ್ಣೀರ ಪ್ರದೀಪ್ ಅವರು, ಮುಂದಿನ ಹದಿನೈದು ದಿನದೊಳಗೆ ಈ ರಸ್ತೆಯನ್ನು ಸರಿಪಡಿಸದಿದ್ದರೆ ರಸ್ತೆ ತಡೆಯನ್ನು ಎಲ್ಲಾ ಸಂಘ ಸಂಸ್ಥೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಕೈಗೊಳ್ಳಲಾಗುವುದು ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಇಂಜಿನಿಯರ್ ನೇರ ಹೊಣೆ ಎಂದು ಎಚ್ಚರಿಸಿದರು.
ಹೈಸೊಡ್ಲೂರು ಗ್ರಾಮದ ಕಳ್ಳೇಂಗಡ ಸುರೇಂದ್ರ ಅವರು ಮಾತನಾಡಿ, ರಸ್ತೆ ತೀವ್ರ ಹದಗೆಟ್ಟಿದ್ದು ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಾಗೂ ಕಾರ್ಮಿಕರು, ಸಾರ್ವಜನಿಕರು ತೀವ್ರ ಸಂಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಇದುವರೆಗೆ ಗುತ್ತಿಗೆದಾರರು ಹಾಗೂ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಪ್ರತಿಭಟನೆಯ ನಿಲುವು ತಳೆಯಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ಗ್ರಾಮಸ್ಥರಾದ ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಲ್ಯಮೀದೇರಿರ ಸುರೇಶ್, ಪಾರುವಂಗಡ ಸುರೇಶ್, ಮಾದೀರ ಅಜಿತ್, ಬಯವಂಡ ಝರು, ಬಾನಂಗಡ ಪ್ರಶಾಂತ್, ಕೋಟ್ರಮಾಡ ರಾಕೇಶ್, ಹೊಟ್ಟೆಂಗಡ ಝರು, ಕೊಡಂಗಡ ರೋಷನ್, ಮಂಡಂಗಡ ಯೋಗೇಶ್, ಕೋಟ್ರಮಾಡ ಗಿಣಿ, ಮಂಡಂಗಡ ರವಿ, ಕಳ್ಳೆಂಗಡ ಸೋಮಯ್ಯ, ಕೋಟ್ರಮಾಡ ಸಾಬು, ಬಾನಂಗಡ ಪ್ರದೀಪ್ ಕೋಟ್ರಮಾಡ ಕಿಟ್ಟಿ ಮತ್ತಿತರರು ಹಾಜರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ