ದಾವಣಗೆರೆ- ಚಿತ್ರದುರ್ಗ- ತುಮಕೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ಅನುದಾನ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಹೊಸದಿಗಂತ ವರದಿ, ಚಿತ್ರದುರ್ಗ :

ಕರ್ನಾಟಕ ರಾಜ್ಯದಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳ ವಿವರ ಹಾಗೂ ದಾವಣಗೆರೆ-ತುಮಕೂರು ವಯಾ ಚಿತ್ರದುರ್ಗ ನೇರ ರೈಲುಮಾರ್ಗದ ಯೋಜನೆಯ ಪ್ರಗತಿ ವಿವರ ಕುರಿತು ಸಂಸದ ಗೋವಿಂದ ಕಾರಜೋಳ ಸಂಸತ್ತಿನಲ್ಲಿ ಮಾಹಿತಿ ಕೇಳಿದರು.

ಸಂಸದರ ಪ್ರಶ್ನೆಗೆ ಉತ್ತರ ನೀಡಿರುವ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ರವರು ರೈಲ್ವೆ ಯೋಜನೆಗಳನ್ನು ವಲಯವಾರು ಮಂಜೂರು ಮಾಡಲಾಗುತ್ತದೆ. ೦೧.೦೪.೨೦೨೪ ರ ಮಾಹಿತಿಯಂತೆ ಕರ್ನಾಟಕ ರಾಜ್ಯದಲ್ಲಿ ಅಂದಾಜು ೪೭,೦೧೬ ಕೋಟಿ ವೆಚ್ಚದ ೨೧ ಹೊಸ ಮಾರ್ಗಗಳು ಹಾಗೂ ೧೦ ಡಬ್ಲಿಂಗ್ ಕಾಮಗಾರಿಗಳು ಸೇರಿ ಒಟ್ಟು ೩,೮೪೦ ಕಿ.ಮೀ ಉದ್ದದ ೩೧ ಮೂಲಸೌಲಭ್ಯ ಯೋಜನೆಗಳು ವಿವಿಧ ಹಂತದ ಪ್ಲಾನಿಂಗ್/ಅನುಮೋದನೆ/ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದ್ದಾರೆ. ಇದರಲ್ಲಿ ೧,೩೦೨ ಕಿ.ಮೀ ಉದ್ದದ ಮಾರ್ಗದ ಕೆಲಸ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ ಮತ್ತು ಮಾರ್ಚ್ ೨೦೨೪ ರವರೆಗೆ ರೂ.೧೭,೩೮೨ ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವೆ ೧೯೧ ಕಿ.ಮೀ ಉದ್ದದ ನೇರ ರೈಲು ಮಾರ್ಗವನ್ನು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಉಚಿತವಾಗಿ ಅವಶ್ಯವಾಗಿರುವ ಭೂಮಿ ಹಾಗೂ ಶೇಕಡ ೫೦ ರಷ್ಟು ನಿರ್ಮಾಣ ವೆಚ್ಚವನ್ನು ಹಂಚಿಕೊಳ್ಳುತ್ತಿದೆ. ಒಟ್ಟಾರೆ ಯೋಜನೆಯ ವೆಚ್ಚ ರೂ.೨,೧೪೨.೩೫ ಕೋಟಿಯಾಗಲಿದ್ದು, ಮಾರ್ಚ್ ೨೦೨೪ ರವರೆಗೆ ರೂ.೩೫೯.೩೨ ಕೋಟಿಯಷ್ಟು ವೆಚ್ಚವನ್ನು ಈ ಯೋಜನೆಗಾಗಿ ಮಾಡಲಾಗಿದೆ. ೨೦೨೪-೨೫ ರ ರೈಲ್ವೆ ಬಜೆಟ್‌ನಲ್ಲಿ ೧೫೦ ಕೋಟಿ ಅನುದಾನವನ್ನು ಈ ಯೋಜನೆಗಾಗಿ ಒದಗಿಸಲಾಗಿದೆ ಎಂದಿದ್ದಾರೆ.

೨೧ ಹೊಸ ಮಾರ್ಗಗಳ ಪೈಕಿ ೩೩,೧೨೫ ಕೋಟಿ ವೆಚ್ಚದ ೨,೫೫೬ ಕಿ.ಮೀ. ಉದ್ದದ ಮಾರ್ಗಗಳಲ್ಲಿ ಈಗಾಗಲೇ ಮಾರ್ಚ್ ೨೦೨೪ ರ ಅಂತ್ಯದ ವೇಳೆಗೆ ೭,೫೯೨ ಕೋಟಿ ರೂ. ವೆಚ್ಚ ಮಾಡಿ ೩೯೫ ಕಿ.ಮೀ. ಉದ್ದದ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ. ೧೩,೮೯೧ ಕೋಟಿ ರೂ. ವೆಚ್ಚದ ೧,೨೮೪ ಕಿ.ಮೀ. ಉದ್ದದ ೧೦ ಡಬ್ಲಿಂಗ್ ಯೋಜನೆಗಳ ಪೈಕಿ ಈಗಾಗಲೇ ೯೭೯೧ ಕೋಟಿ ರೂ. ವೆಚ್ಚ ಮಾಡಿ ೯೦೭ ಕಿ.ಮೀ. ಡಬ್ಲಿಂಗ್ ಕಾಮಗಾರಿ ಮುಗಿಸಲಾಗಿದೆ.

೨೦೧೪ ರಿಂದ ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮತ್ತು ಯೋಜನೆಗಳ ಪೂರ್ಣಗೊಳಿಸುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ೨೦೦೯-೨೦೧೪ ರವರೆಗೆ ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ ೭,೮೩೫ ಕೋಟಿ ರೂ. ದೊರಕಿದ್ದರೆ, ಅದೇ ಮೋದಿಜಿ ಆಡಳಿತಾವಧಿಯಲ್ಲಿ ೨೦೨೪-೨೫ನೇ ಸಾಲಿನ ಒಂದೇ ವರ್ಷದಲ್ಲಿ ೭,೫೫೯ ಕೋಟಿ ರೂ. ಅನುದಾವನ್ನು ರಾಜ್ಯಕ್ಕೆ ನೀಡಲಾಗಿದೆ. ಇದು ಯು.ಪಿ.ಎ. ಆಡಳಿತಾವಧಿಯಲ್ಲಿ ನೀಡಿದ ಅನುದಾನಕ್ಕೆ ಹೋಲಿಕೆ ಮಾಡಿದರೆ ಒಂದೇ ವರ್ಷದಲ್ಲಿ ಬರೋಬ್ಬರಿ ೯ ಪಟ್ಟು ಹೆಚ್ಚಿನ ಅನುದಾನವನ್ನು ಮೋದಿಜಿ ಸರ್ಕಾರ ನೀಡಿದೆ ಎಂದಿದ್ದಾರೆ.

ಯು.ಪಿ.ಎ. ಆಡಳಿತಾವಧಿಯಲ್ಲಿ ೨೦೦೯ ರಿಂದ ೨೦೧೪ ರವರೆಗೆ ಪ್ರತಿ ವರ್ಷ ೧೧೩ ಕಿ.ಮೀ ಸರಾಸರಿಯಂತೆ ೫೬೫ ಕಿ.ಮೀ ರೈಲ್ವೆ ಹಳಿ ನಿರ್ಮಾಣ ಮಾಡಿದರೆ, ಅದೇ ಮೋದಿಜಿ ಆಡಳಿತಾವಧಿಯಲ್ಲಿ ೨೦೧೪-೨೦೨೪ ರವರೆಗೆ ವರ್ಷಕ್ಕೆ ಸರಾಸರಿ ೧೬೩ ಕಿ.ಮೀ ನಂತೆ ಒಟ್ಟು ೧,೬೩೩ ಕಿ.ಮೀ ರೈಲ್ವೆ ಹಳಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!