ಹೊಸದಿಗಂತ ವರದಿ, ಮಂಡ್ಯ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತವಾಗಿ ಎಲ್ಲ ಸೌಲಭ್ಯಗಳನ್ನೂ ಕೊಡುತ್ತಾರೆಂಬ ಕಾರಣಕ್ಕೆ ಜನ ಸಿದ್ದರಾಮಯ್ಯನವರನ್ನು ಅಧಿಕಾರಕ್ಕೆ ತಂದರು. ಆದರೆ ಅವರು ಉಚಿತವಾಗಿ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಾನು ಕ್ಲೀನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡದಲ್ಲಿ 14 ನಿವೇಶನಗಳನ್ನು ನುಂಗಿ, ಕ್ಲೀನ್ ಎಂದು ಹೇಗೆ ಹೇಳಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಬಂದ ತಕ್ಷಣ ಕಂಪಣ್ಣ ಆಯೋಗ ರಚನೆ ಮಾಡಿದರು, 6 ತಿಂಗಳಾಯಿತು, ವರ್ಷವಾದರೂ ವರದಿ ಕೊಡಲಿಲ್ಲ. ಈಗ ದೇಸಾಯಿ ಆಯೋಗ ರಚನೆ ಮಾಡಿದ್ದಾರೆ. ಈಗಲೂ ಅದು 6ತಿಂಗಳಲ್ಲ 60 ವರ್ಷವಾದರೂ ವರದಿ ಕೊಡುವುದಿಲ್ಲ. ಕೇವಲ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತರಿಗೆ ನ್ಯಾಯವಾಗಿ ಸೇರಬೇಕಾದ ಜಮೀನನ್ನು ಸಿಎಂ ಕುಟುಂಬ ಅಕ್ರಮವಾಗಿ ಮಾಡಿಕೊಂಡಿದೆ. ನಿಂಗ ಎಂಬುವರು 1936ರಲ್ಲಿ 1 ರೂ. ನೀಡಿ 3.16 ಎಕರೆ ಜಮೀನನ್ನು ಹರಾಜಿನಲ್ಲಿ ಪಡೆದುಕೊಂಡಿದ್ದರು. ಇವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಎಂಬ ಮೂವರು ಮಕ್ಕಳಿದ್ದರು. 28 ವರ್ಷಗಳ ಹಿಂದೆ ನಿಂಗ ಮೃತಪಟ್ಟಿದ್ದಾರೆ. ಜೊತೆಗೆ ಅವರ ಪತ್ನಿ ನಿಂಗಮ್ಮ ಸಹ 1990ರಲ್ಲಿ ನಿಧನರಾಗಿದ್ದಾರೆ. ಈ ಕುಟುಂಬದಲ್ಲಿ ಸಧ್ಯ 27 ಜನರಿದ್ದಾರೆ. 1968ರಲ್ಲಿ ಸದರಿ ಜಮೀನನ್ನು ಮೈಲಾರಯ್ಯನಿಗೆ ವರ್ಗಾಹಿಸಲಾಗಿದೆ ಎಂದು ತಿಳಿಸಿದರು.