ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಯಾಕ್ರಮೆಂಟೊ ಕೌಂಟಿಯ ಗುರುದ್ವಾರದಲ್ಲಿ ಮಾರ್ಚ್ ತಿಂಗಳಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನರನ್ನು ಬಂಧಿಸಲಾಗಿದೆ.
ಅಮೆರಿಕ ಪೊಲೀಸರು ಭಾನುವಾರ ಮತ್ತು ಸೋಮವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಿಖ್ ಸಮುದಾಯಕ್ಕೆ ಸೇರಿದ 17 ಜನರನ್ನು ಸೆರೆ ಹಿಡಿಯಲಾಗಿದೆ.
ಬಂಧಿತರಿಂದ ಮಿಷನ್ ಗನ್ ಹಾಗೂ ಎ.ಕೆ–47 ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಮೆರಿಕ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ಸ್ಯಾಕ್ರಮೆಂಟೊ ಕೌಂಟಿಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ಯುವಕರ ನಡುವಿನ ವೈಯಕ್ತಿಕ ದ್ವೇಷ ಈ ಘಟನೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ :
ಮಾ.26ರಂದು ಮಧ್ಯಾಹ್ನದ ವೇಳೆಗೆ ಬ್ರಾಡ್‌ಶಾ ಗುರುದ್ವಾರದಲ್ಲಿ ಕೀರ್ತನೆ ಕಾರ್ಯಕ್ರಮದ ವೇಳೆ ಪರಸ್ಪರ ಪರಿಚಿತ ವ್ಯಕ್ತಿಗಳ ನಡುವೆ ಜಗಳ ನಡೆದಿದೆ. ಈ ವೇಳೆ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಸ್ನೇಹಿತನಿಗೆ ಗುಂಡು ಹಾರಿಸಿದ್ದಾನೆ, ನಂತರ ಮತ್ತೊಬ್ಬ ವ್ಯಕ್ತಿ ಆ ವ್ಯಕ್ತಿಯ ಮೇಲೆ ಗುಂಡು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾನೆ, ಬಳಿಕ ಸ್ಥಳದಿಂದ ಓಡಿ ಹೋಗಿದ್ದಾನೆ.