ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 12 ಗಂಟೆಯಲ್ಲಿ 17 ರೋಗಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಥಾಣೆಯ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ.
ಕಳೆದ 12 ಗಂಟೆಯಲ್ಲಿ 17 ರೋಗಿಗಳು ನಾನಾ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ತೀವ್ರ ನಿಗಾ ಘಟಕದಲ್ಲಿದ್ದ 12 ರೋಗಿಗಳು ಹಾಗೂ ಇತರ ವಿಭಾಗದ 5 ರೋಗಿಗಳು ಮೃತಪಟ್ಟಿದ್ದಾರೆ. ಇದು ಆಸ್ಪತ್ರೆಯ ಚಿಕಿತ್ಸಾ ವ್ಯವಸ್ಥೆಯ ಮೇಲೆ ಭಾರೀ ಅನುಮಾನ ಮೂಡಿಸಿದೆ. ಇದೀಗ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ಆಡಳಿತದಲ್ಲಿ ಅವ್ಯವಸ್ಥೆ, ವೈದ್ಯ ಸಿಬ್ಬಂದಿ ಕೊರತೆ ಮತ್ತು ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳದಿಂದಾಗಿ ಆಸ್ಪತ್ರೆ ವಿವಾದಕ್ಕೆ ಸಿಲುಕಿದೆ.
ಥಾಣೆಯಲ್ಲಿನ ಜಿಲ್ಲಾಸ್ಪತ್ರೆ ಮುಚ್ಚಲಾಗಿರುವುದರಿಂದ ಎಲ್ಲಾ ರೋಗಿಗಳು ಇದೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದಾಗಿ ವೈದರು, ವೈದ್ಯಕೀಯ ಉಪಕರಣಗಳ ಕೊರತೆ ಎದುರಾಗಿದೆ. ಆಗಸ್ಟ್ 5ರಂದು ಕೂಡ ಒಂದೇ ದಿನ ಐವರು ರೋಗಿಗಳು ಸಾವನ್ನಪ್ಪಿದ್ದರು. ಇದೀಗ ಒಂದೇ ದಿನದಲ್ಲಿ 17 ರೋಗಿಗಳು ಸಾವನ್ನಪ್ಪಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.