ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗೋವಾದಲ್ಲಿಂದು ನಡೆದ ವಾಕಿಂಗ್, ಸ್ವಿಮ್ಮಿಂಗ್ ಹಾಗೂ ಸೈಕಲ್ ಮೂರು ರೀತಿಯ ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು 1,900 ಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟ ಮೂರು ವಿಭಾಗಗಳಲ್ಲಿ ಭಾಗಿಯಾಗಿ 8 ಗಂಟೆ, 27 ನಿಮಿಷ ಮತ್ತು 32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಈ ಮೂಲಕ ಐರನ್ ಮ್ಯಾನ್ 70.3 ರೇಸ್‌ನಲ್ಲಿ (Ironman Race) ವಿಜೇತರಾದ ಪ್ರಥಮ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಭಾಜನರಾದರು.
ಈ ಸಂಸತವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಸಂಸದರು, ಗೋವಾ (Goa) ಐರನ್‌ಮ್ಯಾನ್ ಸ್ಪರ್ಧೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, 50ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಈ ರೇಸ್‌ನಲ್ಲಿ ಪಾಲ್ಗೊಂಡಿರುವುದು ವಿಶೇಷ ಎಂದರು. ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಠಿಣ ಸವಾಲಾಗಿದ್ದು, ಕಳೆದ 4 ತಿಂಗಳಿಂದ ಫಿಟ್‌ನೆಸ್ ಅನ್ನು ಸುಧಾರಿಸಲು ಕಠಿಣವಾಗಿ ತರಬೇತಿ ಪಡೆದಿದ್ದು, ಪ್ರಸ್ತುತ ಈ ಸವಾಲನ್ನು ಪೂರ್ಣಗೊಳಿಸಿದ್ದಕ್ಕಾಗಿ ನನಗೆ ಅತ್ಯಂತ ಸಂತೋಷವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಉಪಕ್ರಮವು ಇಂತಹ ಸವಾಲನ್ನು ತೆಗೆದುಕೊಳ್ಳಲು ಪ್ರೇರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ʻಫಿಟ್ ಇಂಡಿಯಾʼ ಅಭಿಯಾನ ನನ್ನ ಇಂದಿನ ಅಭಿಯಾನಕ್ಕೆ ಸ್ಫೂರ್ತಿಯಾಗಿದೆ ಎಂದು ಶ್ಲಾಘಿಸಿದರು.
ನನ್ನ ದೈಹಿಕ ಸಾಮರ್ಥ್ಯವು ದೇಶದ ಅಭ್ಯುದಯಕ್ಕೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ಮೂಡಿದೆ. ದೊಡ್ಡ ಮಹತ್ವಾಕಾಂಕ್ಷೆಗಳನ್ನು ಬೆನ್ನಟ್ಟುತ್ತಿರುವ ಭಾರತವು ಯುವ ರಾಷ್ಟ್ರವಾಗಿ ರೂಪುಗೊಳಿಸುವಲ್ಲಿ ನಮ್ಮ ದೈಹಿಕ ಸಾಮರ್ಥ್ಯ ಪೋಷಿಸುವಲ್ಲಿ ಹೆಚ್ಚಿನ ಉತ್ತೇಜನ ದೊರಕಿದ್ದು, ಭಾರತವನ್ನು ಆರೋಗ್ಯಕರ ರಾಷ್ಟ್ರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ನಮ್ಮ ದೈಹಿಕ ಸಾಮರ್ಥ್ಯವನ್ನು ಸ್ಥಿರವಾಗಿಸಿಕೊಳ್ಳುವ ಮೂಲಕ ಯಾವುದೇ ಉದ್ಯಮದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಸುಧಾರಿಸಬಹುದಾಗಿದೆ. #FitIndia ಅಭಿಯಾನವು ಕ್ರೀಡಾ ಸ್ಫೂರ್ತಿ, ಜಾಗೃತಿಯನ್ನು ಹೆಚ್ಚಿಸುವಲ್ಲಿ ಮತ್ತು ಹೆಚ್ಚಿನ ಜನರನ್ನು ಫಿಟ್‌ನೆಸ್ ದಿನಚರಿಗೆ ತರುವಲ್ಲಿ ಸಹಕಾರಿಯಾಗಿದೆ. ಅದು ನಮ್ಮ ರಾಷ್ಟ್ರಕ್ಕೆ ಮೂಲಭೂತವಾಗಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.