ಜೈಪುರದಿಂದ ಕುವೈತ್‌ಗೆ 192 ಮೆಟ್ರಿಕ್ ಟನ್ ಹಸುವಿನ ಸಗಣಿ ರಫ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೇಶದಿಂದ ಹಸುವಿನ ಸಗಣಿಯನ್ನು ರಫ್ತು ಮಾಡಲಾಗುತ್ತಿದೆ. 192 ಮೆಟ್ರಿಕ್‌ ಟನ್‌ ಹಸು ಸಗಣಿ ಪೂರೈಕೆ ಮಾಡಬೇಕೆಂದು ಕುವೈತ್‌ನಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ, ಬೃಹತ್ ಪ್ರಮಾಣದ ಸಗಣಿ ರಫ್ತು ಮಾಡಲಾಗುವುದು ಎಂದು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ತಿಳಿಸಿದ್ದಾರೆ. ಸಾವಯವ ಗೊಬ್ಬರಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಹಸುವಿನ ಸಗಣಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ದೊರಕಿದೆ. ಜೈಪುರ ಮೂಲದ ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಡೆವಲಪ್‌ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಈ ಆದೇಶ ಸಿಕ್ಕಿದೆ.

ಮುಸ್ಲಿಂ ಬಾಹುಳ್ಯದ ಕುವೈತ್‌ನಿಂದ ಭಾರತದ ದೇಸಿ ಹಸುಗಳ ಸಗಣಿ ಆಮದು ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು ಎಂದು ಕಂಪನಿಯ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಟೊಂಕ್ ರಸ್ತೆಯಲ್ಲಿರುವ ಶ್ರೀಪಿಂಜ್ರಾಪೋಲ್ ಗೌಶಾಲಾದ ಸನ್‌ರೈಸ್ ಆರ್ಗ್ಯಾನಿಕ್ ಪಾರ್ಕ್‌ನಲ್ಲಿ ನೈಸರ್ಗಿಕ ಗೊಬ್ಬರ ಹಸುವಿನ ಸಗಣಿಯ ಪ್ಯಾಕೇಜಿಂಗ್ ಕೆಲಸ ನಡೆಯುತ್ತಿದ್ದು, ಮೊದಲ ಸರಕು  ಜೂನ್ 15 ರಂದು ಕನಕಪುರ ರೈಲು ನಿಲ್ದಾಣದಿಂದ ಹೊರಡಲಿದೆ. ಅಲ್ಲಿಂದ ಗುಜರಾತ್‌ನ ಮುಂದ್ರಾ ಬಂದರಿನ ಮೂಲಕ ಕುವೈತ್‌ ತಲುಪಲಿದೆ .

2020-21ರಲ್ಲಿ ಭಾರತದಿಂದ ಪ್ರಾಣಿ ಉತ್ಪನ್ನಗಳ ರಫ್ತು 27,155.56 ಕೋಟಿ ರೂಪಾಯಿ ಎಂದು ಅತುಲ್ ಗುಪ್ತಾ ಮಾಹಿತಿ ನೀಡಿದ್ದಾರೆ. ಸಾವಯವ ಗೊಬ್ಬರ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಅದರಿಂದ ಉತ್ಪತ್ತಿಯಾಗುವ ಉತ್ಪನ್ನಗಳ ಬಳಕೆಯು ಗಂಭೀರ ಕಾಯಿಲೆಗಳಿಂದ ಮನುಷ್ಯರನ್ನು ಮುಕ್ತಗೊಳಿಸುತ್ತವೆ. ಹಾಗಾಗಿ ಹಲವು ದೇಶಗಳು ಗೋಮಯದಿಂದ ತಯಾರಿಸಿದ ಸಾವಯವ ಗೊಬ್ಬರವನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿವೆ.

ಖರ್ಜೂರದ ಬೆಳೆಗೆ ಪೌಡರ್ ರೂಪದಲ್ಲಿ ದೇಸಿ ಸಗಣಿಯನ್ನು ಬಳಸುವುದರಿಂದ ಹಣ್ಣಿನ ಗಾತ್ರ ಹಾಗೂ ಉತ್ಪಾದನೆಯಲ್ಲಿ ನಿರೀಕ್ಷಿತ ಹೆಚ್ಚಳ ಕಂಡು ಬಂದಿರುವುದರ ಬಗ್ಗೆ ಕುವೈತ್ ನ ಕೃಷಿ ವಿಜ್ಞಾನಿಗಳು ವ್ಯಾಪಕ ಸಂಶೋಧನೆ ನಡೆಸಿದ್ದಾರೆ. ಅವರ ಬಳಿ ಸಾಕಷ್ಟು ಗೋವಿನ ಸಗಣಿ ಲಭ್ಯವಿಲ್ಲದ ಕಾರಣ ಕುವೈತ್ ಮೂಲದ ಕಂಪನಿ ಲಾಮೋರ್ ಜೈಪುರ ಸಂಸ್ಥೆಯಿಂದ 192 ಮೆಟ್ರಿಕ್ ಟನ್ ದೇಶಿ ಹಸುವಿನ ಸಗಣಿ ಆಮದು ಮಾಡಿಕೊಳ್ಳಲು ಆರ್ಡರ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!