ಬಡವರಿಗೆ ಸೂರು ಒದಗಿಸಲು ವಿಫಲರಾದ ಶಾಸಕ ರಾಘವೇಂದ್ರ, ಕೊಪ್ಪಳದಲ್ಲಿಲ್ಲ 19,365 ಜನಕ್ಕೆ ಸ್ವಂತ ಮನೆ!

ಹೊಸದಿಗಂತ ವರದಿ ಕೊಪ್ಪಳ:

ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಸ್ವಂತ ಸೂರಿನಲ್ಲಿ ಜೀವಿಸುವುದು ಕೂಡ ಅಷ್ಟೇ ಮುಖ್ಯ. ಸರ್ಕಾರದ ವಿವಿಧ ವಸತಿ ಯೋಜನೆಯಡಿ ನಿವೇಶನ ಹಾಗೂ ಮನೆ ನಿರ್ಮಾಣ ಮಾಡುವುದು ಸ್ಥಳೀಯ ಶಾಸಕರ ಜವಾಬ್ದಾರಿಯಾಗಿದೆ. ಆದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 19, 365 ಜನರಿಗೆ ಸ್ವಂತ ಸೂರಿಲ್ಲ. ಬಡವರಿಗೆ ಸೂರು ಒದಗಿಸುವಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ವಿಫಲವಾಗಿರುವುದು ಅಂಕಿ – ಅಂಶಗಳಿಂದ ಬಹಿರಂಗವಾಗಿದೆ.

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇನ್ನೂ ಅನೇಕ ಜನರಿಗೆ ಸ್ವಂತ ಮನೆ ಹಾಗೂ ನಿವೇಶನ ಸಿಕ್ಕಿಲ್ಲ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 15,346 ಜನರು ವಸತಿ ರಹಿತರು ಹಾಗೂ 4,019 ನಿವೇಶನ ರಹಿತರುವುದು ವಸತಿ ಮತ್ತ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಸಾಮಾಜಿಕ – ಆರ್ಥಿಕ ಜಾತಿ ಜನಗಣತಿ 2011ರ ಸಮೀಕ್ಷೆಯಲ್ಲಿ ಕೈ ಬಿಟ್ಟು ಹೋದ ವಸತಿ ಹಾಗೂ ನಿವೇಶನ ರಹಿತರನ್ನು 2018 ರಲ್ಲಿ ಗುರುತಿಸುವ ಕಾರ್ಯ ನಡೆಸಲಾಗಿದೆ. 2018 ರ ಸಮೀಕ್ಷೆ ಪ್ರಕಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ 11,006 ವಸತಿ ರಹಿತರು ಹಾಗೂ 2,708 ನಿವೇಶನ ರಹಿತರಿರುವುದು ಕಂಡು ಬಂದಿದೆ. ನಗರ ಪ್ರದೇಶಕ್ಕೆ ಸಂಬಂಧಪಟ್ಟಂತೆ 2016-17 ಮತ್ತು 2017-18 ನೇ ಸಾಲಿನಲ್ಲಿ ವಸತಿ ಹಾಗೂ ನಿವೇಶನ ರಹಿತರ ಬೇಡಿಕೆ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯ ಪ್ರಕಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ನಗರ ಪ್ರದೇಶದಲ್ಲಿ 1311 ವಸತಿ ರಹಿತರು ಹಾಗೂ 4340 ನಿವೇಶನ ರಹಿತರು ಕಂಡು
ಬಂದಿದ್ದಾರೆ.

ಜನರು ಉತ್ತಮ ಜೀವನ ನಡೆಸುವ ಸಲುವಾಗಿ ಸೂರು ನೀಡಲು ಸರ್ಕಾರವು ಹಲವಾರು ಯೋಜನೆ ಜಾರಿಗೊಳಿಸಿದರೂ ಎಲ್ಲರಿಗೂ ಸೂರು ದೊರಕಿಸಿಕೊಡುವಲ್ಲಿ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ಸಹಕಾರ ನೀಡದಿರುವುದು ಅಂಕಿ- ಅಂಶಗಳಿಂದ ತಿಳಿದು ಬಂದಿದೆ. ಅರ್ಹ ವಸತಿ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಫಲಾನುಭವಿಗಳು ಸ್ವಂತ ನಿವೇಶನ ಹೊಂದಿರುವುದು ಕಡ್ಡಾಯವಾಗಿದೆ. ಆದರೆ ಅನೇಕ ಅರ್ಹ ಫಲಾನುಭವಿಗಳು ನಿವೇಶನ ಹೊಂದಿಲ್ಲದ ಕಾರಣ ವಸತಿ ಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ: ಅರ್ಹ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಮುಖ್ಯಮಂತ್ರಿಗಳ ಗ್ರಾಮೀಣ ಮತ್ತು ನಗರ ನಿವೇಶನ ಯೋಜನೆಗಳು ಜಾರಿಯಲ್ಲಿವೆ. ಈ ಯೋಜನೆಗಳ ನಿವೇಶನ ಹಂಚಿಕೆ ಮಾಡಲು ಸ್ಥಳೀಯವಾಗಿ ಲಭ್ಯವಿರುವ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳಿಂದ ಮಂಜೂರು ಮಾಡಿಸಿಕೊಂಡು ನಿವೇಶನ ಹಂಚಿಕೆ ಮಾಡಬೇಕು. ಒಂದು ವೇಳೆ ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಮಾತ್ರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಜಮೀನು ಖರೀದಿ ಸಮಿತಿ ಮೂಲಕ ಜಮೀನು ಖರೀದಿ ಮಾಡಬೇಕು. ಆದರೆ, ಸ್ಥಳೀಯ ಶಾಸಕರು ಇಚ್ಛಾಶಕ್ತಿ ಕೊರತೆಯಿಂದ ಸಾವಿರಾರು ಜನರಿಗೆ ಸೂರಿಲ್ಲದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!