ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ದಂಗೆಯಿಂದಾಗಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಯುಎಇ(UAE ) ಗೆ ಶಿಫ್ಟ್ ಮಾಡಲಾಗಿದೆ.
ಈ ವಿಚಾರವನ್ನು ಐಸಿಸಿ ಮಂಗಳವಾರ ಅಧಿಕೃತ ಪ್ರಕಟನೆ ಮೂಲಕ ತಿಳಿಸಿದೆ.
ಪಂದ್ಯಾವಳಿಯು ಯುಎಇಯ ಎರಡು ಸ್ಥಳಗಳಾದ ದುಬೈ ಮತ್ತು ಶಾರ್ಜಾದಲ್ಲಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಆತಿಥ್ಯ ವಹಿಸಿದ್ದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ’ ಎಂದು ಅಲ್ಲಾರ್ಡಿಸ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೇನಾ ಮುಖ್ಯಸ್ಥ ಜನರಲ್ ವಕಾರ್ ಜಮಾನ್ ಅವರಿಗೆ ಪತ್ರ ಬರೆದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿತ್ತು. ಆದರೆ ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವಂತೆ ಕಾಣುತ್ತಿಲ್ಲ ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟೂರ್ನಿಯನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿತ್ತು. ಹೀಗಾಗಿ ಐಸಿಸಿ ಯುಎಇಗೆ ಆತಿಥ್ಯ ನೀಡಿದೆ.