Sunday, January 29, 2023

Latest Posts

ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 2.46 ಕೋಟಿ ರೂ.ಬಿಡುಗಡೆಗೊಳಿಸಿದ ಸುಬ್ರಮಣಿಯನ್‌ ಸ್ವಾಮಿ

ಹೊಸದಿಗಂತ ವರದಿ ಮಡಿಕೇರಿ:
ಕೊಡಗಿನ ಕುಗ್ರಾಮಗಳಲ್ಲಿರುವ ಕೊಡವರ ಐನ್’ಮನೆ ರಸ್ತೆ ಮತ್ತು ಇತರ ರಸ್ತೆಗಳ ಅಭಿವೃದ್ಧಿಗೆ ಹಿರಿಯ ರಾಜಕಾರಣಿ, ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ರಾಜ್ಯಸಭಾ ಸದಸ್ಯರ ನಿಧಿಯಿಂದ 2.46 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ.
ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್’ಸಿ) ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ಕೊಡವರ ಮೇಲೆ ಅಪಾರ ಅಭಿಮಾನ ತೋರಿರುವ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ರಾಜ್ಯಸಭಾ ನಿಧಿಯಿಂದ ಇಷ್ಟು ದೊಡ್ಡ ಮೊತ್ತದ ಕೊಡುಗೆ ನೀಡಿರುವುದು ಶ್ಲಾಘನೀಯ ಮತ್ತು ಸಂಘಟನೆಯೊಂದರ ಕೋರಿಕೆಗೆ ಈ ರೀತಿಯಲ್ಲಿ ಸ್ಪಂದಿಸಿರುವುದು ವಿಶೇಷ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಕೊಡಗಿನ ಅಭಿವೃದ್ಧಿ ಕಾರ್ಯಗಳಿಗಾಗಿ ದೊಡ್ಡ ಪ್ರಮಾಣದ ಆರ್ಥಿಕ ಸಹಾಯವನ್ನು ನೀಡಿದ ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಈ ಕುರಿತು ಮುತುವರ್ಜಿ ವಹಿಸಿದ ವಿರಾಟ್ ಹಿಂದೂಸ್ಥಾನ್ ಸಂಗಮ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಡಾ.ಸ್ವಾಮಿಯವರ ಆಪ್ತ ಮುಂಬಯಿಯ ಜಗದೀಶ್ ಶೆಟ್ಟಿ ಅವರುಗಳಿಗೆ ಕೊಡವರ ಪರವಾಗಿ ಸಿ.ಎನ್.ಸಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬಿಡುಗಡೆ ಮಾಡಿರುವ 2.46 ಕೋಟಿ ರೂ.ಗಳನ್ನು ಮೂರು ವಿಭಾಗಗಳನ್ನಾಗಿ ಮಾಡಿದ್ದು, 1ನೇ ವಿಭಾಗಕ್ಕೆ ರೂ. 1.50 ಕೋಟಿ, 2ನೇ ವಿಭಾಗಕ್ಕೆ ರೂ.21.14 ಲಕ್ಷ ಮತ್ತು 3ನೇ ವಿಭಾಗಕ್ಕೆ ರೂ.75 ಲಕ್ಷ ಎಂದು ಬಿಡುಗಡೆಗೊಳಿಸಲಾಗಿದೆ.
ಮುಂಬಯಿನ ಸಬ್ ಅರ್ಬನ್ ಡಿಸ್ಟ್ರಿಕ್ಟ್ ಕಲೆಕ್ಟೊರೇಟ್‌ಗೆ ಹಣ ಜಮಾವಣೆಗೊಂಡಿದ್ದು, ಅಲ್ಲಿಂದ ನೇರವಾಗಿ ಕೊಡಗು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆಗೊಂಡಿದೆ ಎಂದು ನಾಚಪ್ಪ ತಿಳಿಸಿದ್ದಾರೆ.

ಅಭಿವೃದ್ಧಿ ಕಾರ್ಯಗಳು: ಒಂದೂವರೆ ಕೋಟಿ ರೂ.ಗಳಲ್ಲಿ ಕುಶಾಲನಗರ ತಾಲೂಕಿನ “ನೂರೊಕ್ಕನಾಡ್ ಹಿಲ್ಸ್” ರಸ್ತೆ, ಮಡಿಕೇರಿ ತಾಲೂಕಿನ ಮರಗೋಡು ಪಂಚಾಯಿತಿಯ ಕತ್ತಲೆಕಾಡು ರಸ್ತೆ ಅಭಿವೃದ್ಧಿ, ರೂ.21.14 ಲಕ್ಷದಲ್ಲಿ ಕಡಗದಾಳು ಪಂಚಾಯಿತಿ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಎನ್.ಎ.ಅಪ್ಪಯ್ಯ ಹಾಗೂ ಎನ್.ಕೆ.ನಂದಾ ಅವರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.75 ಲಕ್ಷದಲ್ಲಿ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ,ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕುಗಳ ವ್ಯಾಪ್ತಿಯಲ್ಲಿನ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಲಿವೆ.

ಮೂರನೇ ವಿಭಾಗದ ರೂ.75 ಲಕ್ಷದ ಪೈಕಿ ರೂ.30 ಲಕ್ಷದಲ್ಲಿ ಕೆದಕಲ್ ಗ್ರಾ.ಪಂ.ನ ಪುಲ್ಲೇರ ಐನ್‌ಮನೆ” ರಸ್ತೆ ಅಭಿವೃದ್ಧಿ, ರೂ.10 ಲಕ್ಷದಲ್ಲಿ ಚೆಯ್ಯಂಡಾಣೆ ಪಂಚಾಯ್ತಿ ವ್ಯಾಪ್ತಿಯ ಕರಡ ಗ್ರಾಮದ “ಮಲೆತಿರಿಕೆ ದೇವನೆಲೆ”ಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.10 ಲಕ್ಷದಲ್ಲಿ ವೀರಾಜಪೇಟೆ ತಾಲೂಕು ಕಂಡಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ “ಬಲ್ಲಡಿಚಂಡ ಬಲ್ಯಮನೆ” ರಸ್ತೆ ಅಭಿವೃದ್ಧಿ, ರೂ.5 ಲಕ್ಷದಲ್ಲಿ ಚೆಂಬೆಬೆಳ್ಳೂರು ಗ್ರಾಮದ “ಚಂಬಂಡ ಜನತ್‌ಕುಮಾರ್ ಅವರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.7 ಲಕ್ಷದಲ್ಲಿ ಚೇರಂಬಾಣೆ ಗ್ರಾ.ಪಂ ವ್ಯಾಪ್ತಿಯ ಕೊಳಗದಾಳು ಗ್ರಾಮದ “ಅಜ್ಜಿನಂಡ ಬಲ್ಯಮನೆ”ಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.6 ಲಕ್ಷದಲ್ಲಿ ಚೇರಂಬಾಣೆ ಗ್ರಾ.ಪಂ ವ್ಯಾಪ್ತಿಯ ಬೇಂಗೂರು ಗ್ರಾಮದ “ಮಂದಪಂಡ ಬಲ್ಯಮನೆ”ಗೆ ತೆರಳುವ ರಸ್ತೆ ಅಭಿವೃದ್ಧಿ, ರೂ.3.50 ಲಕ್ಷದಲ್ಲಿ ಪೊನ್ನಂಪೇಟೆ ತಾಲೂಕು ಕುಟ್ಟ ಗ್ರಾ.ಪಂ ವ್ಯಾಪ್ತಿಯ ಚೂರಿಕಾಡ್ ಕೆ.ಬಾಡಗ ಗ್ರಾಮದ “ಅಜ್ಜಿಕುಟ್ಟಿರ ಲೋಕೇಶ್” ಅವರ ಮನೆಗೆ ತೆರಳುವ ರಸ್ತೆ, ರೂ.3.50 ಲಕ್ಷ ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಚಿಕ್ಕಬೆಟ್ಟಗೇರಿ ಗ್ರಾಮದ ಎನ್.ಯು.ಅಚ್ಚಯ್ಯ ಅವರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ.

ಒಟ್ಟು ರೂ.2.46 ಕೋಟಿಯ ಅಭಿವೃದ್ಧಿ ಕಾರ್ಯವನ್ನು ಕೊಡಗು ಲೋಕೋಪಯೋಗಿ ಇಲಾಖೆಗೆ ವಹಿಸಿಕೊಡಲಾಗಿದೆ. ಒಂದನೇ ವಿಭಾಗದ ಅಭಿವೃದ್ಧಿ ಕಾರ್ಯದ “ಭೂಮಿಪೂಜೆ”ಯನ್ನು ಡಾ.ಸುಬ್ರಮಣ್ಯನ್ ಸ್ವಾಮಿ ಅವರ ಮುಂಬಯಿ ಪ್ರತಿನಿಧಿ ನೆರವೇರಿಸಲಿದ್ದು, ನ.26ರಂದು ಮಡಿಕೇರಿಯಲ್ಲಿ ನಡೆಯುವ “32ನೇ ಕೊಡವ ನ್ಯಾಷನಲ್ ಡೇ”ಗೆ ಆಗಮಿಸುವ ಡಾ.ಸ್ವಾಮಿ ಅವರು ಪೂರ್ಣಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ ಎಂದು ನಾಚಪ್ಪ ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!