ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುರ್ಮಿ ಸಮುದಾಯದವರಿಗೆ ಎಸ್ಟಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಮೂರು ರಾಜ್ಯಗಳಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ 20 ರೈಲುಗಳನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರೈಲ್ವೆ ಬುಧವಾರ ತಿಳಿಸಿದೆ.
ಆಗ್ನೇಯ ಮತ್ತು ಪೂರ್ವ ಕರಾವಳಿ ರೈಲ್ವೆಯಲ್ಲಿ ಇನ್ನೂ 47 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಕುರ್ಮಿ ಜನರು ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನಕ್ಕೆ ಒತ್ತಾಯಿಸಿ ರೈಲ್ವೆ ಹಳಿಗಳ ಮೇಲೆ ನಿಂತು ಧರಣಿ ನಡೆಸುತ್ತಿದ್ದಾರೆ.
ತಮಗೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಕುರ್ಮಾಲಿ ಭಾಷೆಯನ್ನು ಸೇರಿಸಬೇಕು ಎಂದು ಒತ್ತಾಯಿಸಿ ಹಲವಾರು ಕುರ್ಮಿ ಗುಂಪುಗಳು ಸೆಪ್ಟೆಂಬರ್ 20 ರಿಂದ ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಒಂಬತ್ತು ರೈಲು ನಿಲ್ದಾಣಗಳಲ್ಲಿ ಅನಿರ್ದಿಷ್ಟಾವಧಿಯ ರೈಲು ತಡೆಗೆ ಕರೆ ನೀಡಿವೆ. ಇದು ಮೂರು ರಾಜ್ಯಗಳಲ್ಲಿ ರೈಲು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಪಶ್ಚಿಮ ಬಂಗಾಳದ ಖೇಮಸುಲಿ ಮತ್ತು ಕಸ್ತೂರ್ ಮತ್ತು ಒಡಿಶಾದ ಹರಿಚಂದನಪುರ, ಜರೈಕೆಲಾ ಮತ್ತು ಧನ್ಪುರದಲ್ಲಿ ರೈಲು ತಡೆ ನಡೆಸಲಾಗುವುದು ಎಂದು ಕುರ್ಮಿ ಸಮುದಾಯಗಳ ಮುಖಂಡರು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪ್ರಮುಖ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೇ ಪೊಲೀಸ್ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ರಾಂಚಿ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿಗಳು ತಿಳಿಸಿದ್ದಾರೆ.