ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊರಾಕೊದಲ್ಲಿ ಉಂಟಾದ ಭೂಕಂಪದಿಂದಾಗಿ ಸಾವಿನ ಸಂಖ್ಯೆ 2000ಕ್ಕೆ ಏರಿಕೆಯಾಗಿದ್ದು, 1,400 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದೇಶದ ಗೃಹ ಸಚಿವಾಲಯ ತಿಳಿಸಿದೆ.
ಶುಕ್ರವಾರ ಸ್ಥಳೀಯ ಕಾಲಮಾನ ರಾತ್ರಿ 11:11ಕ್ಕೆ 6.8 ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ಮೊರಾಕೊದ ತುಂಬೆಲ್ಲಾ ಹೆಣಗಳ ರಾಶಿ ಕಂಡುಬರುತ್ತಿದೆ. ಕಂಡಲ್ಲೆಲ್ಲಾ ಕುಸಿದ ಕಟ್ಟಡಗಳೇ ಕಾಣುತ್ತಿವೆ.
ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ದೇಶದ ಮೂರನೇ ಒಂದು ಭಾಗವು ಭೂಕಂಪದಿಂದ ಪ್ರಭಾವಿತವಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಐತಿಹಾಸಿಕ ನಗರ ಮರ್ರಾಕೇಶ್‌ಗೆ ಭಾರಿ ಹೊಡೆತ ಬಿದ್ದಿದೆ.
ಅಲ್ ಹೌಜ್, ಮರ್ರಾಕೇಶ್, ಉರಾಝಾಝೇಟ್, ಅಜಿಲಾಲ್, ಚೆಚವುವಾ ಮತ್ತು ತಾರೌಡಾಂಟ್ ಪುರಸಭೆಗಳಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 329 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಕಟ್ಟಡಗಳು ಅಲುಗಾಡುವ ಮತ್ತು ಕುಸಿಯುವ, ಜನರು ಬೀದಿಗಳಲ್ಲಿ ಕಿರುಚುತ್ತಾ ಓಡುತ್ತಿರುವ ಮತ್ತು ಕೆಲವು ಜನರು ದಟ್ಟವಾದ ಧೂಳಿನಿಂದ ಹೊರಬರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ನಗರದ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿದ್ದು, ಸ್ಥಳೀಯರು ರಕ್ತದಾನ ಮಾಡುವಂತೆ ಅಧಿಕಾರಿಗಳು ಕೋರಿದ್ದಾರೆ. ಅವಶೇಷಗಳಡಿ ಇನ್ನೂ ಅನೇಕ ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.