Sunday, October 1, 2023

Latest Posts

ಕೃಷಿ ಮೇಳದಲ್ಲಿ ನೀರೂರಿಸುವ ವೆರೈಟಿ ಖಾದ್ಯ, ಯಾವುದರಿಂದ ಮಾಡಿದ್ದು ಗೊತ್ತಾ?

ಮಹಾಂತೇಶ ಕಣವಿ

ಸುಸ್ಥಿರ ಆಹಾರ ಮೂಲಗಳ ಪೌಷ್ಟಿಕಾಂಶದ ಒಂದು ಜಿಜ್ಞಾಸೆ ವಿಧಾನ ‘ಕೀಟ ಆಧಾರಿತ ಪಾಕಪದ್ಧತಿ’ಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗ ಕೃಷಿ ಮೇಳದಲ್ಲಿ ಪರಿಚಯಿಸಿರುವುದು ವಿಸ್ಮಯಕಾರಿ.

ಕೃಷಿ ವಿವಿಯ ರೈತ ಜ್ಞಾನಾಭಿವೃದ್ಧಿ ಕೇಂದ್ರದ ‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನದಲ್ಲಿ ಕೀಟಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಬೇರೆ ಬೇರೆ ಕೀಟಗಳಿಂದ ತಯಾರಿಸಿದ ಭಕ್ಷ್ಯಗಳು ಜನಮನ ಸೆಳೆಯುತ್ತಿವೆ. ನಮ್ಮ ಪಾಕಶಾಲೆ ಪರಧಿ ವಿಸ್ತರಿಸುವ ಜೊತೆ ಸಾಂಪ್ರದಾಯಿಕ ಆಹಾರಗಳ ಆಯ್ಕೆಗಳನ್ನು ಮೀರಿ ನಮ್ಮ ಜಾಗತಿಕ ಆಹಾರದ ಸವಾಲು ಎದುರಿಸಲು ಸಮರ್ಥನೀಯ ಮತ್ತು ಸಮೃದ್ಧಿ ಕಂಡುಹಿಡಿಯುವ ವಿಧಾನ ಇದಾಗಿದೆ.

ಯಾವೆಲ್ಲಾ ಭಕ್ಷ್ಯಗಳು ಗಮನ ಸೆಳೆದವು?
ರೇಷ್ಮೆ ಕೋಶದ ಡ್ರೈ ಚಿಲ್ಲಿ, ಕೀಟದ ಬರ್ಗರ್, ರೇಷ್ಮೆ ಕೋಶದ ಪನ್ನೀರ್ ಟಿಕ್ಕಾ, ಮಿಡತೆ ಮತ್ತು ಜಿರಳೆ ಕೀಟದ ಡ್ರೈ, ರೇಷ್ಮೆ ಕೋಶದ ಸೂಪ್, ಮಿಡತೆಗಳ-65, ಹುರಿದ ಕೀಟದ ಕಡ್ಡಿ, ಶಿವನಕುದರೆ ತಂದೂರಿ ಗಮನ ಸೆಳೆದಿವೆ.

ಕಪ್ಪು ನೋಣದ ಮಸಾಲೆ, ಕೆಂಪು ಇರುವೆ ಚಟ್ಟಿ, ವಿವಿಧ ಕೀಟಗಳ ಮಿಶ್ರಣದ ಡ್ರೈ, ಗೆದ್ದಲು ಹುಳಗಳ ಆಹಾರ ಪದಾರ್ಥ ನೋಡುಗರಿಗೆ ನಯನ ಮನೋಹರ ದೃಶ್ಯ ಎನಿಸಿದರೂ, ಒಂದು ಕ್ಷಣ ಆಶ್ಚರ್ಯವನ್ನೂ ಉಂಟು ಮಾಡುತ್ತದೆ.

ಜಪಾನ್, ಥೈಲಾಂಡ್, ಚೀನಾ ಇತ್ಯಾದಿ ದೇಶಗಳು ಅಲ್ಲದೇ, ಭಾರತದ ಈಶಾನ್ಯ ರಾಜ್ಯಗಳಲ್ಲೂ ಕೀಟಗಳು ಶತಮಾನಗಳಿಂದ ಸಾಂಪ್ರದಾಯಿಕ ಆಹಾರದ ಭಾಗವಾಗಿದೆ.

ಇಂತಹ ಪದಾರ್ಥ ಕೃಷಿ ಮೇಳದ ಆಕರ್ಷಣೆಯಾಗಿದೆ. ಕೀಟಗಳನ್ನು ಆಹಾರವಾಗಿ ಸೇವಿಸುವ ಕಲ್ಪನೆಯು ಆರಂಭದಲ್ಲಿ ಹಿಂಜರಿಕೆ ಅಥವಾ ಅಸಹ್ಯ ಎನಿಸದರೂ, ಈ ಸಣ್ಣ ಜೀವಿಗಳು ಮನುಷ್ಯನ ಮೇಲೆ ತರುವ ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ಅನ್ವೇಷಿಸಲು ಯೋಗ್ಯವಾಗಿದೆ.

ಕ್ರಿಕೆಟ್ ಪಕೋರಗಳಿಂದ ಹಿಡಿದು, ರೇಷ್ಮೆಹುಳು, ಇರುವೆ ಚಟ್ಟಿವರೆಗೆ, ಅನ್ವೇಷಿಸಲು ಬಾಯಲ್ಲಿ ನೀರೂರಿಸುವ ಭಕ್ಷ್ಯಗಳಿವೆ. ಕೀಟಗಳು ರುಚಿಕರ, ನಂಬದಷ್ಟು ಪೌಷ್ಟಿಕ ಆಹಾರ ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿ ಕೆ.ಟಿ.ಶಿವಕುಮಾರ, ನಮ್ಮ ಆಹಾರ ಕ್ರಮದಲ್ಲಿ ಕೀಟಗಳನ್ನು ಸೇರಿಸಿಕೊಳ್ಳುವುದರ ಕಲ್ಪನೆಗಳನ್ನು ಮರು ಪರಿಶೀಲಿಸಲು ಮತ್ತು ಆರೋಗ್ಯಕರ ಊಟವನ್ನು ರೂಪಿಸಲು ಹೊಸ ದೃಷ್ಟಿಕೋನ ಸ್ವೀಕರಿಸಲು ಕೀಟಗಳ ಭಕ್ಷ್ಯಗಳ ಪ್ರದರ್ಶನ ಆಹ್ವಾನಿಸಿದಂತಿದೆ.

ಕೀಟಗಳು ಆರೋಗ್ಯಕರ ಹೃದಯ ಹಾಗೂ ಮೆದಳು ಕಾಪಾಡಿಕೊಳ್ಳಲು ಸಹಕಾರಿ. ಇವುಗಳ ಆಹಾರ ಪದಾರ್ಥ ಬಳಕೆ ವಿವಿಧ ದೇಶ ಹಾಗೂ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಈಗ ಕೃಷಿ ಮೇಳ ಮೂಲಕ ಪರಿಚಯಿಸಲಾಗಿದೆ ಎನ್ನುತ್ತಾರೆ ಕೃಷಿ ವಿವಿ ಕೀಟಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಕಲಾವತಿ ಕಂಬಳಿ.‌

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!