Sunday, December 4, 2022

Latest Posts

2023ಕ್ಕೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು ನಿಶ್ಚಿತ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್ 10 ರಿಂದ 12 ಸ್ಥಾನ ಗಳಿಸಲೇಬೇಕು. ಹಾಗಾಗಿ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಸವನಗುಡಿಯಲ್ಲಿ ಇಂದು ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದ ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್- ಬಿಜೆಪಿಯ ಪಾಪದ ಕೊಡ ತುಂಬಿದೆ. ಕಾಂಗ್ರೆಸ್ ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ, ಬಿಜೆಪಿ ಯವರು ಯಾವ ಸಂಕಲ್ಪ ಯಾತ್ರೆ ಆದರೂ ಮಾಡಿಕೊಳ್ಳಲಿ.‌ 2023ಕ್ಕೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರುತ್ತಾರೆ. ಒಂದು ಮತಕ್ಕೆ 2000, ಮತ್ತೆ ಕುಕ್ಕರ್ ಅಂತಾ ಬರ್ತಾರೆ. ಇದೆಲ್ಲ ಹಣ ರಾಜ್ಯದ ಜನರಿಂದ ಲೂಟಿ ಮಾಡಿರುವ ಹಣ. ಆದರೆ ನಾವು ಯಾರು ದುಡ್ಡು ಲೂಟಿ ಹೊಡೆದಿಲ್ಲ ಎಂದು ಹೇಳಿದರು.

ಭಾರತ್ ಜೋಡೋ ದಿಂದ ಜನರ ಸಮಸ್ಯೆ ಗಳ ಅರ್ಥ ಆಗಲ್ಲ. ಇವಾಗ ಏನೋ ಕಾಂಗ್ರೆಸ್ ನಾಯಕರು ಪಟ್ಟಿ ಮಾಡ್ತಾರಂತೆ. ಅವರಿಂದ ಏನು ಕೂಡ ಜನರ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಟಾಂಗ್ ನೀಡಿದರು.

ಬಡವ, ಶ್ರೀಮಂತ ಅಂತ ತಾರತಮ್ಯ ಇಲ್ಲದೆ ಅತ್ಯಾದುನಿಕ ಶಿಕ್ಷಣ ಕೊಡಿಸಬೇಕು. ಗ್ರಾಮ ಪಂಚಾಯತಿ, ಪ್ರತಿ ವಾರ್ಡ್ ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಸರ್ಕಾರ ಕೊಡಬೇಕು. ಉಚಿತ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಕೆಂಪೇಗೌಡ ಹೆಸರಿನಲ್ಲಿ ಕೌಶಲ್ಯ ವಿವಿ

ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ, ಅದರಲ್ಲೂ ಭವಿಷ್ಯಕ್ಕೆ ದಿಕ್ಕು ತೋರಿಸುವ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ. ಈ ಉದ್ದೇಶ ಸಾಕಾರಕ್ಕಾಗಿ ನಾಡಪ್ರಭು ಶ್ರೀ ಕೆಂಪೇಗೌಡರ ಹೆಸರಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಮಾಗಡಿಯಲ್ಲಿ ಈ ವಿವಿಯನ್ನು ಸ್ಥಾಪನೆ ಮಾಡಲಾಗುವುದು. ಈ ಮೂಲಕ ಎಲ್ಲರಿಗೂ ವೃತ್ತಿಪರ ಶಿಕ್ಷಣ ಸಿಗುವಂತಾಗಬೇಕು. ಜನರ ಬದುಕು ಕಟ್ಟಿಕೊಡಬೇಕಿದೆ. ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್‍ ಮುಖಂಡ ಬಾಗೇಗೌಡ, ಅರಮನೆ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!