ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿದಂತೆ 24 ಜನರು ಸಾವನ್ನಪ್ಪಿದ್ದಾರೆ. ಔಷಧಿ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಶಂಕರ್ ರಾವ್ ಚವ್ಹಾಣ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ 12 ಮಕ್ಕಳ ಪೈಕಿ ಆರು ಹೆಣ್ಣುಮಕ್ಕಳು ಮತ್ತು ಆರು ಗಂಡು ಮಕ್ಕಳಿದ್ದಾರೆ ಎಂದು ಆಸ್ಪತ್ರೆಯ ಡೀನ್ ಖಚಿತಪಡಿಸಿದರು. ಮೃತ 12 ವಯಸ್ಕರು ಹಾವು ಕಡಿತ ಸೇರಿದಂತೆ ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿರುವುದಾಗಿ ದೃಢಪಟ್ಟಿದೆ.
80 ಕಿ.ಮೀ ವ್ಯಾಪ್ತಿಯಲ್ಲಿ ಒಂದೇ ಆಸ್ಪತ್ರೆ ಇರುವುದರಿಂದ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಔಷಧಗಳ ಕೊರತೆ ಎದುರಾಗಿದೆ. ಸ್ಥಳೀಯ ಅಂಗಡಿಗಳಲ್ಲಿ ಔಷಧ ಖರೀದಿಸಿ ರೋಗಿಗಳಿಗೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಮಗುವಿನ ತಂದೆ ಆರೋಪಿಸಿದ್ದಾರೆ. ಈ ಶಿಶುಗಳ ಸಾವು ನಾಚಿಕೆಗೇಡಿನ ಸಂಗತಿ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ವಕ್ತಾರ ವಿಕಾಸ್ ಲಾವಾಂಡೆ ಹೇಳಿದ್ದಾರೆ. ಮಗುವಿನ ಸಾವಿಗೆ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ ಬಿಜೆಪಿ ಸರ್ಕಾರ ಮಕ್ಕಳಿಗೆ ಔಷಧಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್‌ನಲ್ಲಿ ಟೀಕಿಸಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಆರೋಗ್ಯ ಸಚಿವರನ್ನು ಹುದ್ದೆಗಳಿಂದ ತೆಗೆದುಹಾಕಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.