2500 ವರ್ಷಗಳ ಪ್ರಾಚೀನ ವರ್ಣಚಿತ್ರ ಶೋಧನೆ: ಕಬ್ಬಿಣ ಯುಗದ ಸಾಕ್ಷ್ಯಾಧಾರ ಲಭ್ಯ

– ಲಿಂಬ್ಯಾ ನಾಯ್ಕ್ ಜೆ

ಕೂಡ್ಲಿಗಿ: ತಾಲೂಕಿನಲ್ಲಿರುವ ಸಿಡೆಗಲ್ಲು ಗ್ರಾಮದ ಹಾಳೂರಿನ ಬೊಮ್ಮದೇವರ ಮಠವೆಂದು ಪೂಜಿಸುವ ಕಲ್ಲಾಸರೆಯಲ್ಲಿ ಸುಮಾರು 2500 ವರ್ಷಗಳ ಹಿಂದಿನ ಬೃಹತ್ ಶಿಲಾಯುಗದ (ಕಬ್ಬಿಣ ಶಿಲಾಯುಗ) ವರ್ಣ ಚಿತ್ರಗಳನ್ನು ಹಂಪಿ ಕನ್ನಡ ವಿವಿ ಶಾಸನ ಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಡಿ. ವೀರೇಶ ನೂತನವಾಗಿ ಸಂಶೋಧಿಸಿದ್ದು, ಸಿಡಗಲ್ಲು ಗ್ರಾಮದ ಪ್ರಾಗೈತಿಹಾಸಿಕದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.

ಗ್ರಾಮದ ಸುತ್ತಲೂ ಬೆಟ್ಟಗಳಿಂದ ಆವೃತ್ತವಾದ ಹಾಳೂರಿನ ಬೊಮ್ಮದೇವರ ಮಠವೆಂದು ಪೂಜಿಸುವ ಬೆಟ್ಟದ ಬಂಡೆಯು ಉತ್ತರಾಭಿಮುಖವಾಗಿದ್ದು, ಇದರ ಮುಖ ಸುಮಾರು 10 ಅಡಿ ಎತ್ತರ ಹಾಗೂ 12 ಅಡಿ ಅಗಲವಿದೆ. ಈ ಕಲ್ಲಾಸರೆಯು ಮುಣಪಾಗಿ ಫಲಕದಂತೆ ಚಿತ್ರ ರಚನೆಗೆ ಸಶಕ್ತವಾಗಿದ್ದು, ಇಡೀ ಬಂಡೆಯ ಉದ್ದಗಲಕ್ಕೂ ವೈವಿಧ್ಯಮಯ ಸಂಖ್ಯೆಯ ಕೆಂಪು ಮತ್ತು ಬಿಳಿ ವರ್ಣದ ಚಿತ್ರಗಳಿವೆ.

ಇಲ್ಲಿಯ ಮನುಷ್ಯನ ಚಿತ್ರಗಳನ್ನು ಬಿಡಿ ವ್ಯಕ್ತಿ ಚಿತ್ರಗಳು, ದಂಪತಿ ಚಿತ್ರಗಳು ಹಾಗೂ ಸಾಲಾಗಿ ನಿಂತ ಸಮೂಹ ನೃತ್ಯಗಾರರ ಚಿತ್ರಗಳು ಎಂದು 3 ವಿಧದಲ್ಲಿ ವಿಂಗಡಿಸಬಹುದು. ಇಲ್ಲಿ ಕೈ ಕೈ ಹಿಡಿದು ಕುಣಿಯುತ್ತಿರುವ ಮಾನವರ 3 ಸಾಲು 7 ಜನರ ತಂಡಗಳ ಮನುಷ್ಯ ಚಿತ್ರಗಳಿವೆ. ಈ ಮಾನವ ಕೃತಿಗಳನ್ನು ಒಂದರ ಪಕ್ಕ ಒಂದರಂತೆ ಚಿತ್ರಿಸಲಾಗಿದೆ. ಎಲ್ಲವೂ ಹೆಚ್ಚು ಕಡಿಮೆ ಒಂದೇ ಅಳತೆಯ ಪ್ರಮಾಣದಲ್ಲಿವೆ. ಕುದುರೆ ಸವಾರಿ ಮಾಡುತ್ತಿರುವ ವೀರ, ಚಿರತೆ ಹಾಗೂ ಗಿಳಿ ಮತ್ತು ಹದ್ದಿನ ಚಿತ್ರಗಳನ್ನು ಬಿಡಿಸಲಾಗಿದೆ. ಜೊತೆಗೆ ಕಲ್ಲಿನ ಉಪಕರಣಗಳು ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.

ವರ್ಣಚಿತ್ರಗಳನ್ನು ಅವಲೋಕಿಸಿದಾಗ ಬಹುತೇಕ ಈ ಚಿತ್ರಗಳು ಛಾಯಾ ರೂಪವಾಗಿದ್ದು, ಅಲ್ಲಲ್ಲಿ ಬಾಹ್ಯ ರೇಖಾ ರೂಪ ಚಿತ್ರಗಳು ಕಂಡು ಬರುತ್ತವೆ. ಪ್ರಮುಖವಾಗಿ ಮನುಷ್ಯರ ರಚನೆಯ ವಿನ್ಯಾಸ ವಿಶೇಷವಾಗಿದ್ದು, ಹೆಚ್ಚು ದೃಢಕಾಯದವರಂತೆ ಎರಡು ಕೈಗಳನ್ನು ಪಕ್ಕದಲ್ಲಿ ಇಳಿ ಬಿಟ್ಟಿದ್ದು, ದುಂಡಾದ ತಲೆ, ವಿಶಾಲ ಭುಜ, ಅಗಲವಾದ ಎದೆ, ಸಣ್ಣದಾದ ನಡು, ಪೃಷ್ಟ, ತೊಡೆ ಹಾಗೂ ತೆಳುವಾದ ಕಾಲುಗಳಿಂದ ಕೂಡಿವೆ. ಬಿಳಿವರ್ಣದ ಮನುಷ್ಯರ ಚಿತ್ರಗಳು ಶೈಲಿಯಲ್ಲಿ ಭಿನ್ನವಾಗಿವೆ. ಪ್ರಾಯಶಃ ಇವು ನಂತರ ಕಾಲದಲ್ಲಿ ರಚಿತವಾಗಿರಬೇಕು. ತ್ರಿಕೋನಾಕೃತಿಯ ಹಾಗೂ ದುಂಡನೆಯ ನಾಲ್ಕು ಕಲ್ಲಿನ ಉಪಕರಣಗಳು ಬಣ್ಣಗಳನ್ನು ಹರಿಯುವಲ್ಲಿ ಉಪಯೋಗಿಸಿದ್ದಿರಬೇಕು ಎಂದು ಊಹಿಸಲಾಗಿದೆ.

ಈ ವರ್ಣಚಿತ್ರಗಳಲ್ಲಿ ಸಮಾಜದ ಪರಂಪರೆ,ಅಭಿಲಾಷೆ, ಅರ್ಥಗರ್ಭಿತ ವಸ್ತು, ತಾಂತ್ರಿಕ ವೈಶಿಷ್ಟ್ಯ, ಕ್ರಮಬದ್ಧ ವರ್ಣ ಸಂಯೋಜನೆ, ಭಾವಪೂರ್ಣ ರೇಖಾ ವಿನ್ಯಾಸ, ಮೇಲಾಗಿ ವಸ್ತುವಿನ ವಿಶಿಷ್ಟ ಸಂಗತಿ, ವ್ಯಕ್ತಿಯನ್ನೇ ಪ್ರಧಾನವಾಗಿಸಿದ ನಿರೂಪಣಾ ಶೈಲಿಗಳು ಎದ್ದು ಕಾಣುವಂತಹ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಕನ್ನಡ ವಿವಿಯ ಡಾ. ಡಿ.ವಿ. ಪರಮಶಿವಮೂರ್ತಿ ಮಾಹಿತಿ ನೀಡಿದ್ದಾರೆ.

ಇಂತಹ ವರ್ಣಚಿತ್ರಗಳ ಸೌಂದರ್ಯ ಹಾಗೂ ಮಹತ್ವ ಅರಿವಾಗುತ್ತಿರುವುದರಿಂದ ಇತ್ತೀಚೆಗೆ ಅವುಗಳ ಸಂಶೋಧನೆ, ಅಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತಿವೆ. ತೀವ್ರ ಪ್ರಗತಿ ಕಾಣುತ್ತಿದೆ. ಈ ಚಿತ್ರಗಳು ಸರಳವಾಗಿದ್ದರೂ ವಿನ್ಯಾಸದ ಸಂಕೇತದಲ್ಲಿ ಸತ್ವ ಶಾಲಿಯಾಗಿವೆ. ಭಾವಗಳ ಸಂಕೇತದಲ್ಲಿ ತೀರ ಪರಿಣಾಮಕಾರಿಯಾಗಿವೆ ಎಂದು ಕನ್ನಡ ವಿವಿ ಶಾಸನಶಾಸ್ತ್ರ ವಿಭಾಗದ ಡಾ. ಅಮರೇಶ ಯತಗಲ್ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!