ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ವಿಕೋಪಕ್ಕೆ ಈವರೆಗೆ 257 ಮಂದಿ ಬಲಿ.. 7 ಸಾವಿರ ಕೋಟಿ ರೂ ನಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈ ವರ್ಷ ಸುರಿದ ಭಾರೀ ಮಳೆಗೆ ಹಿಮಾಚಲ ಪ್ರದೇಶವು ನಲುಗಿ ಹೋಗಿದೆ. ಭಾರತ ದೇಶದಲ್ಲೇ ಅತೀ ಹೆಚ್ಚು ಹಾನಿಗೊಳಗಾಗಿರುವ ರಾಜ್ಯ ಎಂದು ಹಿಮಾಚಲ ಪ್ರದೇಶವನ್ನು ಪರಿಗಣಿಸಲಾಗಿದೆ.

ರಾಜ್ಯದಲ್ಲಿ ಸುರಿದ ಅತ್ಯಧಿಕ ಮಳೆಯಿಂದಾಗಿ ಈವರೆಗೆ ಅಂದಾಜು ಒಟ್ಟು 7,020.28 ಕೋಟಿ ರೂ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಅಧಿಕಾರಿಗಳು ನೀಡಿರುವ ಮಾಹಿತಿಗಳ ಪ್ರಕಾರ, ಮಳೆ, ಪ್ರವಾಹಕ್ಕೆ ಸಿಲುಕಿ ಈವರೆಗೆ 257 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಭೂಕುಸಿತ ಮತ್ತು ಹಠಾತ್​ ಪ್ರವಾಹದಿಂದ ಸಾವನ್ನಪ್ಪಿದವರು 66 ಮಂದಿ, ರಸ್ತೆ ಅಪಘಾತ ಮತ್ತು ಗುಡ್ಡ ಕುಸಿತ ಇತರ ಕಾರಣಗಳಿಂದ ಪ್ರಾಣ ಬಿಟ್ಟವರು 191 ಜನರು, ಅದಲ್ಲದೆ 32 ಜನರು ನಾಪತ್ತೆಯಾಗಿದ್ದಾರೆ. ಈ ನಡುವೆ ಗಾಯಗೊಂಡವರ ಸಂಖ್ಯೆ 290ಕ್ಕೆ ಏರಿಕೆಯಾಗಿದೆ.

ಭೀಕರ ಪ್ರವಾಹದಿಂದ 1376 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದರೆ, 7935 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 270 ಅಂಗಡಿಗಳು, 2,727 ಗೋಶಾಲೆಗಳಿಗೆ ತೀವ್ರ ಹಾನಿಗೊಳಗಾಗಿವೆ.

2023ನೇ ಸಾಲಿನಲ್ಲಿ ಹಿಮಾಚಲ ರಾಜ್ಯವೊಂದರಲ್ಲೇ 90 ಭೂಕುಸಿತಗಳು ಮತ್ತು 55 ಹಠಾತ್​ ಪ್ರವಾಹಗಳುಂಟಾಗಿವೆ. ಇದರ ಪರಿಣಾಮ ರಾಜ್ಯದಲ್ಲಿ 2 ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 450 ರಸ್ತೆಗಳನ್ನು ಮುಚ್ಚಲಾಗಿದ್ದು,1,814 ವಿದ್ಯುತ್​ ಸರಬರಾಜು ಯೋಜನೆಗಳಿಗೆ ಇನ್ನೂ ಅಡಚಣೆಯಾಗಿದೆ. ಜತೆಗೆ 59 ನೀರು ಸರಬರಾಜು ಯೋಜನೆಗಳು ಸ್ಥಗಿತಗೊಂಡಿದೆ.

ಮಳೆ ಮುಂದುವರೆದ ಹಿನ್ನೆಲೆ ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಇಂದು ಸಹ ರಜೆ ಘೋಷಿಸಿದೆ.

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆ ಮುಚ್ಚಲಾಗಿದ್ದ ಹಲವಾರು ರಸ್ತೆಗಳು ಸಂಚಾರಕ್ಕೆ ಮಕ್ತವಾಗಿದೆ. ಇವುಗಳಲ್ಲಿ ರಾಷ್ಟ್ರೀಯ ಹೆದ್ದಾರಿ-05, ರಾಷ್ಟ್ರೀಯ ಹೆದ್ದಾರಿ-205 ಮತ್ತು ರಾಷ್ಟ್ರೀಯ ಹೆದ್ದಾರಿ-907A ಬಳಿ ಇರುವ ಪ್ರಮುಖ ರಸ್ತೆಗಳು ಸೇರಿವೆ. ರಾಷ್ಟ್ರೀಯ ಹೆದ್ದಾರಿ 05 ನಲ್ಲಿ ಸುಮಾರು 11 ರಸ್ತೆಗಳನ್ನು ಸಂಚಾರಕ್ಕೆ ತೆರೆಯಲಾಗಿದೆ. ಕೆಲವೆಡೆ ತುರ್ತು ಸಂಚಾರಕ್ಕಾಗಿ ಒಂದು ಮಾರ್ಗವನ್ನು ಮಾತ್ರ ತೆರೆಯಲಾಗಿದೆ.

ಭಾರತೀಯ ಹವಾಮಾನ ಕೇಂದ್ರವು ರಾಜ್ಯದ ಹಲವೆಡೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಕೂಡ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!