ನೇರ ತೆರಿಗೆ ವಸೂಲಾತಿಯಲ್ಲಿ 26 ಶೇ. ಹೆಚ್ಚಳ: 13.63 ಲಕ್ಷ ಕೋಟಿ ರೂ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ 26 ಶೇಕಡಾ ಏರಿಕೆಯಾಗಿದ್ದು ಇಲ್ಲಿಯವರೆಗೆ ಒಟ್ಟೂ 13.63 ಲಕ್ಷ ಕೋಟಿ ರೂಪಾಯಿಗಳಷ್ಟು ನೇರ ತೆರಿಗೆ ಸಂಗ್ರಹಿಸಲಾಗಿದೆ. ಅಧಿಕೃತ ಹೇಳಿಕೆಯ ಪ್ರಕಾರ, TDS ಕಡಿತಗಳು ಮತ್ತು ಆರೋಗ್ಯಕರ ಕಾರ್ಪೊರೇಟ್ ಮುಂಗಡ ತೆರಿಗೆ ಪಾವತಿಯು ತೆರಿಗೆ ಸಂಗ್ರಹದಲ್ಲಿನ ಏರಿಕೆಗೆ ಕೊಡುಗೆ ನೀಡಿದೆ. ಮರುಪಾವತಿಗಳನ್ನು ಸರಿಹೊಂದಿಸಿದ ನಂತರ ನಿವ್ವಳ ತೆರಿಗೆ ನೇರ ತೆರಿಗೆ ಸಂಗ್ರಹವು 11.35 ಲಕ್ಷ ಕೋಟಿ ರೂ.ಗಳಷ್ಟಿದೆ, ಇದು ಪೂರ್ಣ ವರ್ಷದ ಒಟ್ಟು ಬಜೆಟ್ ಗುರಿಯ ಶೇಕಡಾ 80 ರಷ್ಟಿದೆ ಎನ್ನಲಾಗಿದೆ.

ಈ ಹಣಕಾಸು ವರ್ಷದಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹವು 14.20 ಲಕ್ಷ ಕೋಟಿ ರೂಪಾಯಿಗಳಷ್ಟಾಗಬಹುದು ಎಂದು ಬಜೆಟ್ ನಲ್ಲಿ ಅಂದಾಜಿಸಲಾಗಿತ್ತು. ಅಂದಾಜಿನ ಮುಕ್ಕಾಲು ಭಾಗಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹಣೆಯಾಗಿದೆ. ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯದ ಮೇಲಿನ ತೆರಿಗೆಯು ನೇರ ತೆರಿಗೆಗಳಿಗೆ ಹೆಚ್ಚಿನ ಕೊಡುಗೆ ನೀಡಿವೆ. ಡಿಸೆಂಬರ್ 17, 2022 ರವರೆಗೆ ಸುಮಾರು 2.28 ಲಕ್ಷ ಕೋಟಿ ಮೌಲ್ಯದ ಮರುಪಾವತಿಗಳನ್ನು ನೀಡಲಾಗಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 68 ರಷ್ಟು ಬೆಳವಣಿಗೆಯಾಗಿದೆ.

13,63,649 ಕೋಟಿಗಳ ಒಟ್ಟು ಸಂಗ್ರಹದಲ್ಲಿ ಕಾರ್ಪೊರೇಷನ್ ತೆರಿಗೆ (ಸಿಐಟಿ) 7.25 ಲಕ್ಷ ಕೋಟಿ ರೂ. ಮತ್ತು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್‌ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 6.35 ಲಕ್ಷ ಕೋಟಿ ರೂಪಾಯಿ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ. ನೇರ ತೆರಿಗೆ ಸಂಗ್ರಹಣೆಯಲ್ಲಿನ ಈ ಹೆಚ್ಚಳವು ಕಂಪನಿಗಳು ಮತ್ತು ವ್ಯಕ್ತಿಗಳ ಗಳಿಕೆಯಲ್ಲಿ ಏರಿಕೆಯನ್ನು ಸೂಚಿಸುತ್ತಿದ್ದು ಸಾಂಕ್ರಾಮಿಕದ ನಂತರ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!